CJI S A Bobde 
ಸುದ್ದಿಗಳು

ವಿಚಾರಣೆಗಳ ತುರ್ತು ಪಟ್ಟಿ ಸದ್ಯಕ್ಕೆ ಇಮೇಲ್ ಮೂಲಕವೇ ಮುಂದುವರೆಯಲಿದೆ: ಸಿಜೆಐ ಬೊಬ್ಡೆ

ಇಮೇಲ್ ಮೂಲಕ ವಿಚಾರಣೆಗಳ ತುರ್ತು ಪಟ್ಟಿ ನಿಗದಿಪಡಿಸುವ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂದು ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದರು.

Bar & Bench

ಪ್ರಕರಣಗಳ ತುರ್ತುಪಟ್ಟಿ ಮಾಡಲು ವೀಡಿಯೊ ಲಿಂಕ್‌ಗಳ ಬೇಡಿಕೆಯನ್ನು ಸುಪ್ರೀಂಕೋರ್ಟ್‌ ಈಡೇರಿಸಲು ಸಾಧ್ಯವಿಲ್ಲ. ಅಂತಹ ಮನವಿಗಳನ್ನು ಸದ್ಯಕ್ಕೆ ಇಮೇಲ್‌ ಮೂಲಕ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಸೋಮವಾರ ತಿಳಿಸಿದ್ದಾರೆ.

ಇಮೇಲ್ ಮೂಲಕ ವಿಚಾರಣೆಗಳ ತುರ್ತು ಪಟ್ಟಿ ನಿಗದಿಪಡಿಸುವ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂದು ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದರು. ವೀಡಿಯೊ ಕಲಾಪದ ಮೂಲಕ ಪ್ರಸ್ತಾಪಿಸಲು ಸ್ವಲ್ಪ ಸಮಯಾವಕಾಶ ನೀಡಬೇಕೆಂದು ಕೋರಿ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಅವರು ಮಾಡಿದ ಮನವಿಗೆ ಪ್ರತಿಕ್ರಿಯೆ ನೀಡಿದ ನ್ಯಾ. ಬೊಬ್ಡೆ ಅವರು “ನಿಮಗೆ ಲಿಂಕ್‌ಗಳಿಗಿರುವ ಬೇಡಿಕೆ ಬಗ್ಗೆ ತಿಳಿದಿಲ್ಲ. ಸದ್ಯಕ್ಕೆ ಇಮೇಲ್‌ಗಳ ಮೂಲಕವೇ ಇದು ನಡೆಯಬೇಕಾಗುತ್ತದೆ” ಎಂದರು.

ಕೊರೊನಾ ಸಾಂಕ್ರಾಮಿಕ ಹರಡಿದ ನಂತರ ಮಾರ್ಚ್‌ 23 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ಪ್ರಾರಂಭವಾಯಿತು. ಆರಂಭದಲ್ಲಿ ನ್ಯಾಯಾಲಯವು ಅತ್ಯಂತ ಸೀಮಿತ ಸಂಖ್ಯೆಯ ಪ್ರಕರಣಗಳನ್ನು ಮಾತ್ರ ವಿಚಾರಣೆ ಮಾಡುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ನ್ಯಾಯಾಲಯ ವರ್ಚುವಲ್‌ ಕಲಾಪದ ಕಾರ್ಯನಿರ್ವಹಣಾ ಸಾಮರ್ಥ್ಯ ಹೆಚ್ಚಿಸಿದ ಬಳಿಕ ಆಲಿಸಿದ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ವೃದ್ಧಿಸಿದೆ. ಆದರೂ ರೆಜಿಸ್ಟ್ರಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಮತ್ತು ಪೂರ್ವಗ್ರಹಪೀಡಿತರಾಗಿ ಪ್ರಕರಣಗಳನ್ನು ಪಟ್ಟಿ ಮಾಡುತ್ತಿರುವುದು ವ್ಯವಸ್ಥೆಗೆ ಮಾರಕವಾಗಿದೆ ಎನ್ನುವ ಆರೋಪಗಳು ಕಡಿಮೆಯಾಗಿಲ್ಲ.

ಇದೇ ವೇಳೆ ರೆಜಿಸ್ಟ್ರಿ ತನ್ನ ಪ್ರಕರಣ ಪಟ್ಟಿ ಮಾಡುತ್ತಿಲ್ಲ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರದ ನ್ಯಾಯಾಧೀಶರೊಬ್ಬರು ಸಲ್ಲಿಸಿದ್ದ ಮನವಿಯನ್ನು ಸೋಮವಾರ ಸುಪ್ರೀಂಕೋರ್ಟ್‌ ವಜಾಗೊಳಿಸಿರುವುದನ್ನು ಗಮನಿಸಬಹುದು.