Justice RF Nariman
Justice RF Nariman 
ಸುದ್ದಿಗಳು

ಪ್ರಕರಣಗಳ ಪ್ರವಾಹ: ಸುಪ್ರೀಂಕೋರ್ಟ್‌ ಈಗ ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯವಾಗಿದೆ ಎಂದ ನ್ಯಾ. ನಾರಿಮನ್

Bar & Bench

ಸುಪ್ರೀಂಕೋರ್ಟ್‌ ಮೆಟ್ಟಿಲೇರುತ್ತಿರುವ ಅಗಾಧ ಸಂಖ್ಯೆಯ ಪ್ರಕರಣಗಳಿಂದಾಗಿ ಸಂವಿಧಾನದ ಕಲ್ಪನೆಯಂತೆ ಸಾಂವಿಧಾನಿಕ ನ್ಯಾಯಾಲಯವಾಗಿದ್ದ ಸರ್ವೋಚ್ಚ ನ್ಯಾಯಾಲಯ ಹೇಗೆ ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯವಾಗಿದೆ ಎಂಬ ಕುರಿತು ಶನಿವಾರ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಚರ್ಚಿಸಿದರು.

ಪ್ರತಿದಿನ ಪ್ರಕರಣಗಳ ಹಿಮಪ್ರವಾಹ (ಅವಲಾಂಚ್‌) ಆಗುತ್ತಿರುವುದರಿಂದ ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡುವುದರ ಮೇಲೂ ಪ್ರಭಾವ ಬೀರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಪುಸ್ತಕ ʼಡಿಸ್ಕಾರ್ಡಂಟ್‌ ನೋಟ್ಸ್‌- ದಿ ವಾಯ್ಸ್‌ ಆಫ್‌ ಡಿಸೆಂಟ್‌ ಇನ್‌ ದಿ ಲಾಸ್ಟ್‌ ಕೋರ್ಟ್‌ ಆಫ್‌ ರೆಸಾರ್ಟ್‌ʼ ಬಿಡುಗಡೆ ಸಮಾರಂಭದಲ್ಲಿ ʼಬಾರ್ & ಬೆಂಚ್ʼ ಕೇಳಿದ ಪ್ರಶ್ನೆ: ನ್ಯಾ. ಎಚ್‌ಆರ್ ಖನ್ನಾ ಅಥವಾ ನ್ಯಾ. ಸರ್ಕಾರ್ ಅವರ ಕಾಲಕ್ಕೆ ಹೋಲಿಸಿದರೆ ಸುಪ್ರೀಂಕೋರ್ಟ್‌ನಲ್ಲಿ ಭಿನ್ನ ತೀರ್ಪು ಹೇಗೆ ಬದಲಾಗಿದೆ ಎಂದು ನೀವು ಭಾವಿಸುತ್ತೀರಿ?

ನ್ಯಾ. ನಾರಿಮನ್‌: ನ್ಯಾ. ಖನ್ನಾ ಅವರ ಕಾಲದಲ್ಲಿ ಕಡಿಮೆ ಪ್ರಕರಣಗಳು ಇದ್ದವು ಮತ್ತು ಆಲೋಚನೆಗೆ ಸಾಕಷ್ಟು ಸಮಯವಿತ್ತು. ಇಂದು ನಮ್ಮ ಮೇಲೆ ಪ್ರತಿದಿನ (ಪ್ರಕರಣಗಳ) ಹಿಮಪ್ರವಾಹ ಉಂಟಾಗುತ್ತಿದೆ. ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗುವಲ್ಲಿ ಮೊದಲಿನ ಕಷ್ಟ ಇಲ್ಲ.

ನ್ಯಾಯಾಧೀಶರು ಹೇಗೆ ಭಾರಿ ಸಂಖ್ಯೆಯ ತೀರ್ಪುಗಳನ್ನು ಬರೆಯಬೇಕಿದೆ ಮತ್ತು ಆಲೋಚನೆಗೆ ಸ್ವಲ್ಪವೇ ಸಮಯ ಇರುತ್ತದೆ ಎಂಬುದನ್ನು ಅವರು ವಿವರಿಸಿದರು. "ನಾವು ಇಂದು ಭಿನ್ನ ತೀರ್ಪು ಬರೆಯಬಹುದು ಎಂಬುದೊಂದು ದೊಡ್ಡ ವಿಷಯವಾಗಿದೆ. ನೀವು ಒಂದು ತೀರ್ಪನ್ನು ಮುಗಿಸಿದರೆ ನಂತರ ಮೂರು ಸಿದ್ಧ ಇರುತ್ತವೆ. ಇದರರ್ಥ ಜನ ಭಿನ್ನಾಭಿಪ್ರಾಯ ಹೊಂದಿಲ್ಲ ಎಂದು ಅಲ್ಲ. ಆದರೆ ಇಂದು ಇದು ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯವಾಗಿದೆಯೇ ವಿನಾ ಸಾಂವಿಧಾನಿಕ ನ್ಯಾಯಾಲಯವಾಗಿಲ್ಲ" ಎಂದು ಅವರು ಪ್ರತಿಕ್ರಿಯಿಸಿದರು.

ನ್ಯಾ. ಎಚ್‌ ಆರ್ ಖನ್ನಾ ಅವರು ಭಿನ್ನಾಭಿಪ್ರಾಯ ತಳೆದ ಎಡಿಎಂ ಜಬಾಲ್ಪುರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳು – ಅಂದಿನ ಮುಖ್ಯ ನ್ಯಾಯಮೂರ್ತಿ ಎ ಎನ್ ರೇ ಮತ್ತು ನ್ಯಾಯಮೂರ್ತಿಗಳಾದ ಖನ್ನಾ, ಎಮ್‌ ಎಚ್ ಬೇಗ್, ವೈ ವಿ ಚಂದ್ರಚೂಡ್ ಮತ್ತು ಪಿಎನ್ ಭಗವತಿ ವಿಚಾರಣೆ ನಡೆಸಿದ್ದರು.

ತುರ್ತು ಪರಿಸ್ಥಿತಿ ವೇಳೆ, ಮೂಲಭೂತ ಹಕ್ಕುಗಳ ಜಾರಿಗಾಗಿ ನ್ಯಾಯಾಲಯದ ಮೊರೆ ಹೋಗುವ ನಾಗರಿಕರ ಹಕ್ಕನ್ನು ಅಮಾನತುಗೊಳಿಸಲಾಗುವುದು ಎಂದು 4: 1 ತೀರ್ಪು ಬಂದಿತ್ತು. ನ್ಯಾ. ಎಚ್ ಆರ್ ಖನ್ನಾ ಮಾತ್ರ ಭಿನ್ನ ತೀರ್ಪು ನೀಡಿದ್ದರು.

ಪ್ರತಿಭಾ ನಾಯಕ್‌ ಪ್ರತಿಷ್ಠಾನ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿತ್ತು. ಬಾಂಬೆ ಹೈಕೋರ್ಟ್‌ ನ್ಯಾ. ಗೌತಮ್‌ ಪಟೇಲ್‌ ಹಿರಿಯ ವಕೀಲ ಡೇರಿಯಸ್‌ ಖಂಬಾಟ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.