supreme court and calcutta HC
supreme court and calcutta HC 
ಸುದ್ದಿಗಳು

ಹದಿಹರೆಯದ ಹುಡುಗಿಯರ ಕುರಿತ ಕಲ್ಕತ್ತಾ ಹೈಕೋರ್ಟ್ ಆದೇಶ: ನ್ಯಾಯಾಧೀಶರು ಬೋಧನೆ ಮಾಡಬಾರದು ಎಂದ ಸುಪ್ರೀಂ ಕೋರ್ಟ್

Bar & Bench

ಹದಿಹರೆಯದ ಹುಡುಗಿಯರು "ಎರಡು ನಿಮಿಷಗಳ ಸಂತೋಷಕ್ಕೆ ಶರಣಾಗುವ ಬದಲು" ತಮ್ಮ ಲೈಂಗಿಕ ಕಾಮನೆಗಳನ್ನು "ನಿಯಂತ್ರಿಸುವ" ಅಗತ್ಯತೆಯ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ ವ್ಯಕ್ತಪಡಿಸಿರುವ ಹೇಳಿಕೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅಸಮಾಧಾನ ಹೊರಹಾಕಿದೆ.

ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ ಎಸ್‌ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್‌ ಹೇಳಿಕೆಗಳು ಭಾರತದ ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಅಡಿಯಲ್ಲಿ ಹದಿಹರೆಯದವರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ ಹೇಳಿಕೆಗಳು ಆಕ್ಷೇಪಾರ್ಹ ಮತ್ತು ಅನಗತ್ಯ ಎಂದು ನ್ಯಾಯಾಲಯ ಹೇಳಿದೆ. "ಈ ಅವಲೋಕನಗಳು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಹದಿಹರೆಯದವರ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ನ್ಯಾಯಾಧೀಶರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಅಥವಾ ಬೋಧಿಸುವ ಅಗತ್ಯವಿಲ್ಲ ಎನ್ನುವುದು ಮೇಲ್ನೋಟಕ್ಕೆ ನಮ್ಮ ಅನಿಸಿಕೆಯಾಗಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Justice Abhay S Oka, Justice Pankaj Mithal and Supreme Court

ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಹಿರಿಯ ವಕೀಲೆ ಮಾಧವಿ ದಿವಾನ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಅವರಿಗೆ ನೆರವಾಗಲು ವಕೀಲ ಲಿಜ್ ಮ್ಯಾಥ್ಯೂ ಅವರನ್ನು ಸರ್ವೋಚ್ಚ ನ್ಯಾಯಾಲಯ ನೇಮಿಸಿದೆ.

ಕಲ್ಕತ್ತಾ ಹೈಕೋರ್ಟ್ ಅಕ್ಟೋಬರ್ 2023ರಂದು ಹೊರಡಿಸಿರುವ ಆದೇಶವನ್ನು ಡಿಸೆಂಬರ್ 7 ಸರ್ವೋಚ್ಚ‌ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.