ಲೈಂಗಿಕ ಕಾಮನೆ ನಿಯಂತ್ರಣಕ್ಕೆ ಹುಡುಗಿಯರಿಗೆ ಕಲ್ಕತ್ತಾ ಹೈಕೋರ್ಟ್ ಆದೇಶ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಸುಪ್ರೀಂ

"ಲೈಂಗಿಕ ಕಾಮನೆಯು ಸಾಮಾನ್ಯವಾದುದಾಗಲಿ, ಒಪ್ಪುವಂತಹದ್ದಾಗಲಿ ಅಲ್ಲ. ನಾವು ಕೆಲವು ಕ್ರಿಯೆಗಳನ್ನು ನಿಲ್ಲಿಸಿದರೆ, ಲೈಂಗಿಕ ತೀವ್ರ ಕಾಮನೆಯು ಸಾಮಾನ್ಯ ಸ್ಥಿತಿಗೆ ಮರಳುತ್ತದೆ " ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕಲ್ಕತ್ತಾ ಹೈಕೋರ್ಟ್, ಸುಪ್ರೀಂ ಕೋರ್ಟ್
ಕಲ್ಕತ್ತಾ ಹೈಕೋರ್ಟ್, ಸುಪ್ರೀಂ ಕೋರ್ಟ್

ಹದಿಹರೆಯದ ಹುಡುಗಿಯರು 'ಎರಡು ನಿಮಿಷಗಳ ಆನಂದಕ್ಕೆ ಶರಣಾಗುವ ಬದಲು' ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಬೇಕು ಎಂಬ ಕಲ್ಕತ್ತಾ ಹೈಕೋರ್ಟ್‌ನ ಅಕ್ಟೋಬರ್ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ [ಹದಿಹರೆಯದವರ ಖಾಸಗಿತನದ ಹಕ್ಕು].

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ಈ ವಿಷಯ ಆಲಿಸಲಿದೆ.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಚಿತ್ತರಂಜನ್ ದಾಸ್ ಮತ್ತು ಪಾರ್ಥ ಸಾರಥಿ ಸೇನ್ ಅವರ ವಿಭಾಗೀಯ ಪೀಠವು ಯುವತಿಯರು ಮತ್ತು ಬಾಲಕರಿಗೆ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸುವಂತೆ ಸಲಹೆ ನೀಡಿತ್ತು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸುವಾಗ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಹದಿಹರೆಯದವರಲ್ಲಿ ಸಮ್ಮತಿಯ ಲೈಂಗಿಕ ಕೃತ್ಯಗಳನ್ನು ಸಹ ಲೈಂಗಿಕ ದೌರ್ಜನ್ಯದೊಂದಿಗೆ ಬೆರೆಸುವ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. 16 ವರ್ಷಕ್ಕಿಂತ ಮೇಲ್ಪಟ್ಟ ಹದಿಹರೆಯದವರನ್ನು ಒಳಗೊಂಡ ಸಮ್ಮತಿಯ ಲೈಂಗಿಕ ಕ್ರಿಯೆಗಳನ್ನು ಅಪರಾಧಮುಕ್ತಗೊಳಿಸುವಂತೆ ಸೂಚಿಸಿತ್ತು.

ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ಸಂಬಂಧಗಳಿಂದ ಉಂಟಾಗುವ ಕಾನೂನು ತೊಡಕುಗಳನ್ನು ತಪ್ಪಿಸಲು ಹದಿಹರೆಯದವರಿಗೆ ಸಮಗ್ರ ಹಕ್ಕು ಆಧಾರಿತ ಲೈಂಗಿಕ ಶಿಕ್ಷಣಕ್ಕೆ ಅದು ಕರೆ ನೀಡಿತ್ತು. ನ್ಯಾಯಾಲಯವು ತನ್ನ ವಿವರವಾದ ತೀರ್ಪಿನಲ್ಲಿ, ಲೈಂಗಿಕ ಕಾಮನೆಗಳಿಗೆ ಕಾರಣ ಮತ್ತು ಅದನ್ನು ನಿಯಂತ್ರಿಸುವ ಮಹತ್ವವನ್ನು ವಿವರಿಸಿತ್ತು. ಲೈಂಗಿಕ ಕಾಮನೆಗಳು ನಮ್ಮ ಸ್ವಂತ ಕ್ರಿಯೆಗಳಿಂದ ಸೃಷ್ಟಿಯಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು.

“ಹದಿಹರೆಯದವರಲ್ಲಿ ಲೈಂಗಿಕತೆ ಸಾಮಾನ್ಯವಾಗಿದೆ. ಆದರೆ, ಲೈಂಗಿಕ ಕಾಮನೆ ಅಥವಾ ಅಂಥ ಕಾಮನೆಗಳ ಕೆರಳುವಿಕೆಯು ಪುರುಷ ಅಥವಾ ಮಹಿಳೆಯ ವ್ಯಕ್ತಿಗತವಾದ ಕಾರ್ಯಚಟುವಟಿಕೆ ಅಧರಿಸಿರುತ್ತದೆ. ಆದ್ದರಿಂದ, ಲೈಂಗಿಕ ಪ್ರಚೋದನೆ ಸಾಮಾನ್ಯವು ಮತ್ತು ಒಪ್ಪಿತವೂ ಅಲ್ಲ. ನಿರ್ದಿಷ್ಟ ಚಟುವಟಿಕೆಗಳನ್ನು ನಿಲ್ಲಿಸಿದರೆ ಲೈಂಗಿಕ ದಾಹ.. ತಣಿಯಲಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿತ್ತು.

ಈ ವಿಚಾರಕ್ಕೆ 'ಕರ್ತವ್ಯ / ಬಾಧ್ಯತೆ ಆಧಾರಿತ ವಿಧಾನವನ್ನು' ಪ್ರಸ್ತಾಪಿಸಿತ್ತು. ಹದಿಹರೆಯದ ಮಹಿಳೆಯರು ಮತ್ತು ಪುರುಷರಿಗೆ ಕೆಲವು ಕರ್ತವ್ಯಗಳನ್ನು ಸೂಚಿಸಿತ್ತು.

ಇದು ಪ್ರತಿಯೊಬ್ಬ ಮಹಿಳಾ ಹದಿಹರೆಯದವರ ಕರ್ತವ್ಯ / ಬಾಧ್ಯತೆಯಾಗಿದೆ:

(i) ತನ್ನ ದೇಹದ ಸಮಗ್ರತೆಯ ಹಕ್ಕನ್ನು ರಕ್ಷಿಸುವುದು.

(ii) ತನ್ನ ಘನತೆ ಮತ್ತು ಆತ್ಮಗೌರವವನ್ನು ರಕ್ಷಿಸುವುದು.

(iii) ಲಿಂಗ ಅಡೆತಡೆಗಳನ್ನು ಮೀರಿ ತನ್ನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದು.

(iv) ಲೈಂಗಿಕ ಕಾಮನೆ/ಪ್ರಚೋದನೆಗಳನ್ನು ನಿಯಂತ್ರಿಸಿ ಏಕೆಂದರೆ ಸಮಾಜದ ದೃಷ್ಟಿಯಲ್ಲಿ ಕೇವಲ ಎರಡು ನಿಮಿಷಗಳ ಲೈಂಗಿಕ ಆನಂದಕ್ಕೆ ಬಲಿಯಾದರೆ ಹಗುರವಾಗಿ ಪರಿಗಣಿಸಲಾಗುತ್ತದೆ.

(v) ಮಹಿಳೆಯ ದೇಹದ ಸ್ವಾಯತ್ತತೆ ಮತ್ತು ಗೌಪ್ಯತೆಯ ಹಕ್ಕನ್ನು ರಕ್ಷಿಸುವುದು.

ಹದಿಹರೆಯದ ಹುಡುಗರನ್ನು ಕುರಿತು ನ್ಯಾಯಾಲಯವು "ಯುವತಿ ಅಥವಾ ಮಹಿಳೆಯ ಮೇಲೆ ತಿಳಿಸಿದ ಕರ್ತವ್ಯಗಳನ್ನು ಗೌರವಿಸುವುದು ಹದಿಹರೆಯದ ಯುವಕರ ಕರ್ತವ್ಯವಾಗಿದೆ ಮತ್ತು ಮಹಿಳೆ, ಅವಳ ಸ್ವಾಭಿಮಾನ, ಅವಳ ಘನತೆ ಮತ್ತು ಗೌಪ್ಯತೆ ಮತ್ತು ಅವಳ ದೇಹದ ಸ್ವಾಯತ್ತತೆಯ ಹಕ್ಕನ್ನು ಗೌರವಿಸಲು ಅವನು ತನ್ನ ಮನಸ್ಸನ್ನು ತರಬೇತುಗೊಳಿಸಬೇಕು" ಎಂದಿತ್ತು.

ಲೈಂಗಿಕತೆಯ ಸುತ್ತಲಿನ ಸಮಸ್ಯೆಗಳ ಬಗ್ಗೆ ಹದಿಹರೆಯದವರಿಗೆ ಮಾರ್ಗದರ್ಶನ ಮತ್ತು ಶಿಕ್ಷಣ ನೀಡುವ ಮಹತ್ವವನ್ನು ಹೈಕೋರ್ಟ್ ಒತ್ತಿಹೇಳಿತ್ತು. ಈ ಉದ್ದೇಶಕ್ಕಾಗಿ, 'ದಾನವು ಮನೆಯಲ್ಲಿಯೇ ಪ್ರಾರಂಭವಾಗಬೇಕು ಮತ್ತು ಪೋಷಕರು ಮೊದಲ ಶಿಕ್ಷಕರಾಗಿರಬೇಕು' ಎಂದು ಪೀಠ ಹೇಳಿದೆ. ಇದಲ್ಲದೆ, ಈ ಅಂಶಗಳು ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಒತ್ತು ನೀಡುವ ಅಗತ್ಯ ಲೈಂಗಿಕ ಶಿಕ್ಷಣವು ಪ್ರತಿ ಶಾಲೆಯ ಪಠ್ಯಕ್ರಮದ ಭಾಗವಾಗಿರಬೇಕು ಎಂದು ಹೈಕೋರ್ಟ್‌ ಹೇಳಿತ್ತು.

Kannada Bar & Bench
kannada.barandbench.com