ಹಂಗಾಮಿ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಅಡ್‌ಹಾಕ್ ನೇಮಕಾತಿ ಸಂಬಂಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯ ಕಾರ್ಯದರ್ಶಿ, ಹಂಗಾಮಿ ಡಿಜಿಪಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ [ನರೇಶ್ ಮಲ್ಕಾನಿ ಮತ್ತು ಲಾಲ್‌ಬಿಯಾಕ್ತಲುವಾಂಗ್ ಖಿಯಾಂಗ್ಟೆ ಇನ್ನಿತರರ ನಡುವಣ ಪ್ರಕರಣ].
ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಪ್ರತಿವಾದಿಗಳಿಗೆ ಸಿಜೆಐ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಸೂಚಿಸಿದ್ದು ಪ್ರಕರಣದ ವಿಚಾರಣೆ ಸೆಪ್ಟೆಂಬರ್ 23ರಂದು ನಡೆಯಲಿದೆ.
ಅನುರಾಗ್ ಗುಪ್ತಾ ಅವರನ್ನು ಹಂಗಾಮಿ ಡಿಜಿಪಿಯಾಗಿ ನೇಮಕ ಮಾಡಿರುವುದು, ಅದಕ್ಕಾಗಿ ತಾತ್ಕಾಲಿಕ ಹುದ್ದೆ ಸೃಷ್ಟಿಸಿರುವುದು, ಸುಪ್ರೀಂ ಕೋರ್ಟ್ ಪ್ರಕಾಶ್ ಸಿಂಗ್ ಪ್ರಕರಣದ.ಲ್ಲಿ ಪೊಲೀಸ್ ಸುಧಾರಣೆಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಗುಪ್ತಾ ಅವರನ್ನು 2019ರಲ್ಲಿ ಚುನಾವಣಾ ಆಯೋಗ ಹುದ್ದೆಯಿಂದ ತೆಗೆದುಹಾಕಿದ್ದು ಆ ವರ್ಷ ನಡೆದ ಸಾರ್ವತ್ರಿಕ ಚುನಾವಣೆ ನಡೆಯುವವರೆಗೆ ರಾಜ್ಯದಿಂದ ಹೊರಗಿರುವಂತೆ ಆದೇಶಿಸಿತ್ತು. ಜೊತೆಗೆ ಅವ ವಿರುದ್ಧ ಹಲವು ಇಲಾಖಾ ತನಿಖೆ ಮತ್ತು ಕ್ರಿಮಿನಲ್ ಮೊಕದ್ದಮೆಗಳಿರುವುದರಿಂದ ಅವರಿಗೆ ಡಿಜಿಪಿ ಹುದ್ದೆ ನೀಡಬಾರದು. ಜೊತೆಗೆ ಹಂಗಾಮಿ ಡಿಜಿಪಿ ಹುದ್ದೆಯನ್ನು ನೇಮಕಮಾಡಬಾರದು ಎಂದು ಅರ್ಜಿ ಕೋರಿದೆ.