Justices L Nageswara Rao, BR Gavai, BV Nagarathna 
ಸುದ್ದಿಗಳು

ಮೂಲಭೂತ ಹಕ್ಕಾಗಿ ವರ್ಚುವಲ್‌ ವಿಚಾರಣೆ: ಬಿಸಿಐ, ಎಸ್‌ಸಿಬಿಎ, 4 ಹೈಕೋರ್ಟ್‌ಗಳು, ವಕೀಲ ಸಂಸ್ಥೆಗಳಿಗೆ ಸುಪ್ರೀಂ ನೋಟಿಸ್

ಆಗಸ್ಟ್ 24 ರಿಂದ ಸಂಪೂರ್ಣ ಭೌತಿಕ (ನೇರ) ವಿಚಾರಣೆಗೆ ಮರಳುವ ಉತ್ತರಾಖಂಡ ಹೈಕೋರ್ಟ್ ನಿರ್ಧಾರವನ್ನು ಅರ್ಜಿ ಪ್ರಶ್ನಿಸಿದೆ.

Bar & Bench

ವರ್ಚುವಲ್‌ ವಿಧಾನದ ಬದಲಿಗೆ ಸಂಪೂರ್ಣವಾಗಿ ಭೌತಿಕ (ನೇರ) ವಿಚಾರಣೆಗೆ ಆಗಸ್ಟ್ 24ರಿಂದ ಮರಳುವ ಉತ್ತರಾಖಂಡ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರ, ನಾಲ್ಕು ಹೈಕೋರ್ಟ್‌ಗಳು, ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಹಾಗೂ ಸುಪ್ರೀಂಕೋರ್ಟ್‌ ವಕೀಲರ ಸಂಘಕ್ಕೆ (ಎಸ್ ಸಿಬಿಎ) ನೋಟಿಸ್ ನೀಡಿದೆ.

ಸಂಪೂರ್ಣ ಭೌತಿಕ ಕಲಾಪ ಆರಂಭಿಸುವ ಸಂಬಂಧ ಉತ್ತರಾಖಂಡ ಹೈಕೋರ್ಟ್‌ ಆಗಸ್ಟ್ 16ರಂದು ಜಾರಿಗೊಳಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.

ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸುವುದನ್ನು ಸಂವಿಧಾನದ 19 (1) (ಎ) ಮತ್ತು (ಜಿ) ವಿಧಿಯಡಿ ಮೂಲಭೂತ ಹಕ್ಕು ಎಂದು ಘೋಷಿಸುವಂತೆ ದೇಶಾದ್ಯಂತ 5,000ಕ್ಕೂ ಹೆಚ್ಚು ವಕೀಲರನ್ನು ಸದಸ್ಯರನ್ನಾಗಿ ಒಳಗೊಂಡಿರುವ ಎಐಜೆಎ ಹಾಗೂ ʼಲೈವ್‌ ಲಾʼ ಜಾಲತಾಣದ ಪತ್ರಕರ್ತ ಸ್ಪರ್ಶ್ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿ ಈ ಹಿಂದೆ ಕೋರಿತ್ತು.

ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಕಿರಿಯ ವಕೀಲರು ತೊಂದರೆ ಅನುಭವಿಸಲು ವರ್ಚುವಲ್ ವಿಚಾರಣೆಯೇ ಕಾರಣ ಎಂದು ಹೇಳಿರುವುದನ್ನು ಪ್ರಕರಣ ಸೋಮವಾರ ವಿಚಾರಣೆಗೆ ಬಂದಾಗ, ನ್ಯಾಯಾಲಯ ಗಮನಿಸಿತು.

" ನ್ಯಾಯಾಲಯದಲ್ಲಿ ನಿಮ್ಮನ್ನು ನೋಡುವುದನ್ನು ನಾವು ಕಳೆದುಕೊಂಡಿದ್ದೇವೆ. ನಾವು ಮುಖತಃ ಸಂಪರ್ಕ ಕಳೆದುಕೊಂಡಿದ್ದು ನ್ಯಾಯಾಲಯದಲ್ಲಿ ವಾದದ ಸಂಪೂರ್ಣ ಹರಿವು ಕಾಣೆಯಾಗಿದೆ! ಯುವ ವಕೀಲರು ಹೇಗೆ ಕಲಿಯುತ್ತಾರೆ? ಇಲ್ಲಿ ಮೂಲಭೂತ ಹಕ್ಕಾದ 19 (1) (ಜಿ) ಉಲ್ಲಂಘನೆಯಾಗಿದೆಯೇ?" ಎಂದು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿತು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ, ಹೈಬ್ರಿಡ್ ವಿಚಾರಣೆಯ ಕ್ರಮ ಅನುಸರಿಸುವುದಾಗಿ ಹೇಳುತ್ತಿದ್ದ ಕೆಲ ಹೈಕೋರ್ಟ್‌ಗಳು ವಕೀಲರ ಭೌತಿಕ ಹಾಜರಾತಿಗೆ ಪರಿಣಾಮಕಾರಿಯಾಗಿ ಒತ್ತಾಯಿಸುತ್ತಿವೆ ಎಂದರು. ಆಗ ಇನ್ನೊಂದು ಬದಿಯ ವಾದ ಕೇಳದೆ ಯಾವುದೇ ಅಧಿಸೂಚನೆಗೆ ತಡೆ ನೀಡುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.

ಸುಪ್ರೀಂ ಕೋರ್ಟ್ ವಕೀಲರ ಸಂಘದ ಪರ ಹಾಜರಾದ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಅವರು ʼಸಂಪೂರ್ಣ ಭೌತಿಕ ವಿಚಾರಣೆಯನ್ನು ಮಾತ್ರʼ ಬಯಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ಬಿಸಿಐ ಮತ್ತು ಎಸ್‌ಸಿಬಿಎ ವಾದ ಆಲಿಸಿದ ನಂತರವೇ ಆದೇಶ ಹೊರಡಿಸುವುದಾಗಿ ತಿಳಿಸಿದ ಪೀಠ ಈ ಸಂಬಂಧ ಪ್ರತಿವಾದಿಗಳಿಗೆ ನೋಟಿಸ್‌ ನೀಡಿತು. ವಕೀಲರಾದ ಶ್ರೀರಾಮ್ ಪರಕ್ಕಾಟ್ ಅವರ ಮೂಲಕ ವಕೀಲರಾದ ಸಿದ್ಧಾರ್ಥ್ ಆರ್ ಗುಪ್ತಾ ಮತ್ತು ಪ್ರೇರಣಾ ರಾಬಿನ್ ಮನವಿ ಸಲ್ಲಿಸಿದ್ದರು.