Vijay, TVK Flag and Supreme Court  
ಸುದ್ದಿಗಳು

ಕರೂರ್ ಕಾಲ್ತುಳಿತ ಪ್ರಕರಣ ಸಿಬಿಐ ತನಿಖೆಗೆ ವಹಿಸಿ ಸುಪ್ರೀಂ ಆದೇಶ: ಮೇಲ್ವಿಚಾರಣೆಗೆ ನ್ಯಾ. ರಾಸ್ತೋಗಿ ಸಮಿತಿ

ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ನ ಎರಡು ಪೀಠಗಳು ಆಲಿಸಿದ್ದೇಕೆ ಎಂದು ನ್ಯಾಯಾಲಯ ಕಳೆದ ವಿಚಾರಣೆ ವೇಳೆ ಪ್ರಶ್ನಿಸಿತ್ತು.

Bar & Bench

ತಮಿಳುನಾಡಿನ ಕರೂರ್ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ [ತಮಿಳಗ ವೆಟ್ರಿ ಕಳಗಂ ಮತ್ತು ಪಿಎಚ್ ದಿನೇಶ್ ಇನ್ನಿತರರ ನಡುವಣ ಪ್ರಕರಣ].

ನಟ ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೆಪ್ಟೆಂಬರ್ 27ರಂದು ನಡೆಸಿದ್ದ ರಾಜಕೀಯ ಸಮಾವೇಶದ ವೇಳೆ ನಟನ ಭಾಷಣ ಕೇಳಲು ದೊಡ್ಡಮಟ್ಟದಲ್ಲಿ ಜನಸಮೂಹ ಹರಿದುಬಂದು ಕಾಲ್ತುಳಿತ ಸಂಭವಿಸಿದ ಪರಿಣಾಮ 41 ಜನ ಸಾವನ್ನಪ್ಪಿದ್ದ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುವಂತೆ ಮದ್ರಾಸ್‌ ಹೈಕೋರ್ಟ್‌ ಅಕ್ಟೋಬರ್ 3ರಂದು ಹೊರಡಿಸಿದ್ದ ಆದೇಶವನ್ನು ಟಿವಿಕೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಸುಪ್ರೀಂಕೋರ್ಟ್‌ ಹಾಲಿ ನ್ಯಾಯಮೂರ್ತಿ ಅಜಯ್‌ ರಾಸ್ತೋಗಿ ಅವರ ನೇತೃತ್ವದ ತ್ರಿಸದಸ್ಯ ಸಮಿತಿ ತನಿಖೆಯ ಮೇಲ್ವಿಚಾರಣೆ ನಡೆಸಲಿದೆ ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠ ತೀರ್ಪು ನೀಡಿದೆ.

ತಮಿಳುನಾಡಿನ ಕರೂರ್ ಕಾಲ್ತುಳಿತದ ಕುರಿತು ಮದ್ರಾಸ್ ಹೈಕೋರ್ಟ್‌ನ ಎರಡು ಪೀಠಗಳು ನೀಡಿದ್ದ ಪರಸ್ಪರ ವಿರೋಧಾಭಾಸದ ತೀರ್ಪುಗಳ ಔಚಿತ್ಯವನ್ನು ನ್ಯಾಯಾಲಯ ಈ ಹಿಂದೆ ಪ್ರಶ್ನಿಸಿತ್ತು. ಮಧುರೈ ಪೀಠ ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದ ಕೆಲವೇ ಗಂಟೆಗಳಲ್ಲಿ ಚೆನ್ನೈನಲ್ಲಿರುವ ಪ್ರಧಾನ ಪೀಠ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು.  

ರಾಜ್ಯ ಸರ್ಕಾರ ನಡೆಸಿದ ತನಿಖೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದಿದ್ದ ಎನ್ ಸೆಂಥಿಲ್‌ ಕುಮಾರ್‌ ಅವರಿದ್ದ ಚೆನ್ನೈನ ಏಕಸದಸ್ಯ ಪೀಠ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ಕಾಲ್ತುಳಿತದ ನಡುವೆ ವಿಜಯ್ ಅವರ ಬಸ್‌ ಡಿಕ್ಕಿ ಹೊಡೆದ ಎರಡು ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು.

ಅಲ್ಲದೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಯಾವುದೇ ಎಫ್‌ಐಆರ್‌ನಲ್ಲಿ ವಿಜಯ್‌ ಹೆಸರಿರಲಿಲ್ಲ. ಆದರೆ ಹೈಕೋರ್ಟ್‌ ಆದೇಶದ ಬಳಿಕವಷ್ಟೇ ಎರಡು ಗುದ್ದೋಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಜಯ್ ಅವರ ಪ್ರಚಾರ ವಾಹನದ ಚಾಲಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು ಎಂದು ವರದಿಯಾಗಿತ್ತು. ರಾಜಕೀಯ ಸಮಾವೇಶಗಳ ವೇಳೆ ಪಾಲಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿಂದಂತೆ ಹೈಕೋರ್ಟ್ ಅಕ್ಟೋಬರ್ 3ರಂದುಈ ಬಗೆಯ  ಆದೇಶ ಹೊರಡಿಸಿತ್ತು. ತಾನು ಕಣ್ಣು ಮುಚ್ಚಿ ಮೂಕ ಪ್ರೇಕ್ಷಕನಾಗಿ ಉಳಿಯಲಾಗದು ಮತ್ತು ತನ್ನ ಸಾಂವಿಧಾನಿಕ ಜವಾಬ್ದಾರಿಗಳಿಂದ ನುಣುಚಿಕೊಳ್ಳಲಾಗದು ಎಂದು ನ್ಯಾಯಾಲಯ ಈ ವೇಳೆ ತಿಳಿಸಿತ್ತು. ಕಾಲ್ತುಳಿತದ ನಂತರ ಟಿವಿಕೆ ನಾಯಕತ್ವ ತೋರಿದ ವರ್ತನೆಯನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿತ್ತು.

ಏಕ ಸದಸ್ಯ ಪೀಠದ ಆದೇಶವನ್ನು ಟಿವಿಕೆ ಈಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.  ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪಕ್ಷ ಮತ್ತು ಅದರ ಅಧಿಕಾರಿಗಳ ವಿರುದ್ಧ ನ್ಯಾಯವ್ಯಾಪ್ತಿ ಮೀರಿದ ಅವಲೋಕನಗಳನ್ನು ಮಾಡಿದೆ ಎಂದು ಟಿವಿಕೆ ವಾದಿಸಿತು. ರಾಜಕೀಯ ಸಮಾವೇಶಗಳಿಗೆ ವಿಶೇಷ ಕಾರ್ಯಾಚರಣಾ ಕಾರ್ಯವಿಧಾನ (ಎಸ್‌ಒಪಿ) ರಚಿಸಬೇಕೆಂದಷ್ಟೇ ಎಸ್‌ಒಪಿಯಲ್ಲಿ ಮನವಿ ಮಾಡಲಾಗಿದ್ದರೂ ಅದನ್ನು ಮೀರಿದ ತೀರ್ಪು ಹೊರಬಿದ್ದಿದೆ ಎಂದು ಅದು ದೂರಿತ್ತು.

ಇದೇ ವೇಳೆ ಕಾಲ್ತುಳಿತದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಟಿವಿಕೆ ಕೋರಿತ್ತು. ಘಟನೆಗೆ ಸಂಬಂಧಿಸಿದಂತೆ ಇತರ ದಾವೆದಾರರು ಸಹ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಿದ್ದರು.

ಟಿವಿಕೆ ಪರವಾಗಿ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ ಮತ್ತವರ ತಂಡ, ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಪಿ ವಿಲ್ಸನ್ ವಾದ ಮಂಡಿಸಿದ್ದರು.