Erendro Leichombam and Supreme Court 
ಸುದ್ದಿಗಳು

ಕೋವಿಡ್‌ಗೆ ಸೆಗಣಿ ಪರಿಹಾರ ಎಂಬ ಬಿಜೆಪಿ ಮುಖಂಡರ ವಾದ ಟೀಕಿಸಿದ್ದ ಸಾಮಾಜಿಕ ಕಾರ್ಯಕರ್ತನ ಬಿಡುಗಡೆಗೆ ಸುಪ್ರೀಂ ಆದೇಶ

ಕೋವಿಡ್‌ಗೆ ಗೋವಿನ ಸೆಗಣಿ ಮತ್ತು ಗಂಜಲ ಮದ್ದು ಎಂದಿದ್ದ ಬಿಜೆಪಿ ನಾಯಕರ ವಾದವನ್ನು ಟೀಕಿಸಿ ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಎರೆಂಡ್ರೊ ಲೈಚೋಮ್‌ಬಾಮ್‌ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ದೂರು ದಾಖಲಿಸಲಾಗಿದೆ.

Bar & Bench

ಮಣಿಪುರದ ಸಾಮಾಜಿಕ ಕಾರ್ಯಕರ್ತ ಎರೆಂಡ್ರೊ ಲೈಚೋಮ್‌ಬಾಮ್‌ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ. ಕೋವಿಡ್‌ಗೆ ಗೋವಿನ ಸೆಗಣಿ ಮತ್ತು ಗಂಜಲ ಮದ್ದು ಎಂದಿದ್ದ ಬಿಜೆಪಿ ನಾಯಕರ ವಾದವನ್ನು ಟೀಕಿಸಿ ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದ ಲೈಚೋಮ್‌ಬಾಮ್‌ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ಪ್ರಕರಣ ದಾಖಲಿಸಿ, ಅವರನ್ನು ಮುಂಜಾಗ್ರತ ಕ್ರಮವಾಗಿ ಬಂಧಿಸಲಾಗಿತ್ತು.

ಇಂಥ ಕ್ಷುಲ್ಲಕ ಕೃತ್ಯಕ್ಕೆ ಒಂದು ದಿನದ ಮಟ್ಟಿಗೂ ಯಾವುದೇ ವ್ಯಕ್ತಿಯನ್ನು ಜೈಲಿನಲ್ಲಿ ಇಡಲಾಗದು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ನೇತೃತ್ವದ ಪೀಠ ಹೇಳಿದೆ.

“ಒಂದು ದಿನದ ಮಟ್ಟಿಗೂ ಅವನ್ನು ಜೈಲಿನಲ್ಲಿ ಇಡಲಾಗದು. ಇಂದೇ ಅವರನ್ನು ಬಿಡುಗಡೆ ಮಾಡುವಂತೆ ನಾವು ಆದೇಶಿಸುತ್ತೇವೆ” ಎಂದು ನ್ಯಾ. ಚಂದ್ರಚೂಡ್‌ ಹೇಳಿದರು.

ಪ್ರಕರಣದ ಸಂಬಂಧ ಮಾಹಿತಿ ಪಡೆಯುತ್ತೇನೆ. ನಾಳೆ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸುವಂತೆ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರಿದರು. ಇದಕ್ಕೆ ಒಪ್ಪದ ಪೀಠವು ಇಂದೇ ಆರೋಪಿಗೆ ಪರಿಹಾರ ಒದಗಿಸುವುದಾಗಿ ಹೇಳಿತು.

“ಅರ್ಜಿದಾರರು ಬಂಧನದಲ್ಲಿ ಮುಂದುವರಿಯುವಂತೆ ಮಾಡುವುದು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಲಿದೆ. ಆದ್ದರಿಂದ ಈ ನ್ಯಾಯಾಲಯದ ಮಧ್ಯಂತರ ನಿರ್ದೇಶನದಂತೆ ಹಾಗೂ ಮುಂದಿನ ಆದೇಶಕ್ಕೆ ಒಳಪಟ್ಟು ಅರ್ಜಿದಾರರಿಂದ ರೂ. 1,000 ವೈಯಕ್ತಿಕ ಬಾಂಡ್‌ ಪಡೆದು ಅವರನ್ನು ಇಂದು ಸಂಜೆ 5 ಗಂಟೆ ಒಳಗೆ ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯ ಆದೇಶ ಮಾಡಿದೆ.

ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲೈಚೋಮ್‌ಬಾಮ್‌ ಅವರು ಸಾಮಾಜಿಕ ಕಾರ್ಯಕರ್ತೆ ಇರೋಮ್‌ ಶರ್ಮಿಳಾ ಅವರ ಮಾಜಿ ಸಹವರ್ತಿಯಾಗಿದ್ದಾರೆ.

ಬಿಜೆಪಿ ನಾಯಕರನ್ನು ಟೀಕಿಸಿದ್ದಕ್ಕಾಗಿ ಲೈಚೋಮ್‌ಬಾಮ್‌ ಅವರನ್ನು ಬಂಧಿಸಲಾಗಿದೆ ಎಂದು ಎಲ್‌ ರಘುಮಣಿ ಸಿಂಗ್‌ ಅವರು ವಕೀಲ ಶಾದನ್‌ ಫರಾಸತ್‌ ಮೂಲಕ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಲಾಗಿದೆ.

ಏಪ್ರಿಲ್‌ 30ರಂದು ಕೋವಿಡ್‌ಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯ ವೇಳೆ ನ್ಯಾ. ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠವು ಸಾಮಾಜಿಕ ಮಾಧ್ಯಮದಲ್ಲಿ ಕೋವಿಡ್‌ ನೀತಿಗಳನ್ನು ಟೀಕಿಸುವವರ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದಿತ್ತು.