Women in legal profession 
ಸುದ್ದಿಗಳು

ಬೆಂಗಳೂರು ವಕೀಲರ ಸಂಘದ ಖಜಾಂಚಿ ಹುದ್ದೆ ಮಹಿಳೆಯರಿಗೆ: ಸುಪ್ರೀಂ ಆದೇಶ

ಸಂಘದ ಆಡಳಿತ ಮಂಡಳಿಯಲ್ಲಿ ವಕೀಲೆಯರ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕು ಎಂದು ಕೂಡ ನ್ಯಾಯಾಲಯ ಹೇಳಿದೆ.

Bar & Bench

ಬೆಂಗಳೂರಿನ ವಕೀಲರ ಸಂಘದ (ಎಎಬಿ) ಆಡಳಿತ ಮಂಡಳಿಯಲ್ಲಿ ಖಜಾಂಚಿ ಹುದ್ದೆಯನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.

ಎಎಬಿ ಆಡಳಿತ ಮಂಡಳಿಯಲ್ಲಿ ಮಹಿಳಾ ವಕೀಲರಿಗೆ ಶೇ 33ರಷ್ಟು ಮೀಸಲಾತಿ ನೀಡುವಂತೆ ಕೋರಿ ಕರ್ನಾಟಕ ಮಹಿಳಾ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಈ ಆದೇಶ ಪ್ರಕಟಿಸಿದೆ.

"ಸಂವಿಧಾನದ 142ನೇ ವಿಧಿಯಡಿ, ಖಜಾಂಚಿ ಹುದ್ದೆ ಮಹಿಳಾ ಅಭ್ಯರ್ಥಿಗೆ ಮಾತ್ರ ಮೀಸಲು ಎಂದು ನಾವು ನಿರ್ದೇಶಿಸುತ್ತೇವೆ. ಈ ಉದ್ದೇಶಕ್ಕಾಗಿ ಉನ್ನತ ಅಧಿಕಾರದ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿ ನಾಮನಿರ್ದೇಶನದ ದಿನಾಂಕ ವಿಸ್ತರಿಸಿ ಚುನಾವಣಾ ದಿನಾಂಕವನ್ನು ಮುಂದೂಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ" ಎಂದು ನ್ಯಾಯಾಲಯ ಆದೇಶಿಸಿದೆ.

ಸಂಘದ ಆಡಳಿತ ಮಂಡಳಿಯಲ್ಲಿ ವಕೀಲೆಯರ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯವು ಮತ್ತಷ್ಟು ನಿರ್ದೇಶಿಸಿದೆ.

ಮಹಿಳಾ ವಕೀಲರಿಗೆ ಹುದ್ದೆಗಳನ್ನು ಮೀಸಲಿಡುವ ಯಾವುದೇ ವ್ಯವಸ್ಥಿತ ನಿಬಂಧನೆಗಳಿಲ್ಲ ಎಂದ ನ್ಯಾಯಾಲಯ ಈ ಆದೇಶ ನೀಡಿತು.

ಮಹಿಳೆಯರಿಗೆ ಮೀಸಲಾತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಈಗಾಗಲೇ ಚುನಾವಣಾ ಪ್ರಕ್ರಿಯೆಗಳು ಮತ್ತು ಸಂಬಂಧಿತ ಚಟುವಟಿಕೆಗಳು ನಡೆಯುತ್ತಿರುವಾಗ ಮಧ್ಯಪ್ರವೇಶಿಸಲು ಹೈಕೋರ್ಟ್‌ಗೆ ಅಧಿಕಾರವಿಲ್ಲ ಎಂದಿದ್ದ ಹೈಕೋರ್ಟ್‌ ನ್ಯಾಯಮೂರ್ತಿ  ಆರ್ ದೇವದಾಸ್ ಅವರು  ವಕೀಲೆ ದೀಕ್ಷಣಾ ಅಮೃತೇಶ್ ಮತ್ತು ಕರ್ನಾಟಕ ಮಹಿಳಾ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದರು

ಎಎಬಿಯ ಈಗಿನ ಬೈಲಾಗಳು ಮಹಿಳಾ ವಕೀಲರಿಗೆ ಮೀಸಲಾತಿ ಒದಗಿಸಿಲ್ಲ. ಆದ್ದರಿಂದ, ಅಂತಹ ಮೀಸಲಾತಿ ಒದಗಿಸಲು ಎಎಬಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿತ್ತು.

ಆದರೆ, ಭಿನ್ನ ನಿಲುವು ತಳೆದಿರುವ ಸುಪ್ರೀಂ ಕೋರ್ಟ್ ವಕೀಲರ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸಲು ಇದು ಸಕಾಲ ಎಂದಿದೆ. "ತಾನು 142ನೇ ವಿಧಿಯಡಿ ಆದೇಶ ಜಾರಿಗೊಳಿಸಿರುವುದಾಗಿ ಹೈಕೋರ್ಟ್‌ ತಿಳಿಸಿದೆ. ಸಮಾನತೆಯ ಅಗತ್ಯತೆ ಇದ್ದು ವಿವಿಧ ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಒದಗಿಸಲು ಇದು ಸಕಾಲ" ಎಂದು ಅದು ವಿವರಿಸಿದೆ.

ಮತ್ತೊಂದೆಡೆ ಡಿಸೆಂಬರ್ 19ರಂದು ಹೊರಡಿಸಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್‌, ದೆಹಲಿಯ ಎಲ್ಲಾ ವಕೀಲರ ಸಂಘಗಳಲ್ಲಿ ಮಹಿಳೆಯರಿಗೆ ಖಜಾಂಚಿ ಸ್ಥಾನ ಮೀಸಲಿರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೆ ದೆಹಲಿ ಹೈಕೋರ್ಟ್‌ ವಕೀಲರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ನಿಯೋಜಿತ ಹಿರಿಯ ಸದಸ್ಯರ ಒಂದು ಹುದ್ದೆಯನ್ನು ಮಹಿಳೆಯರಿಗೆ ಮೀಸಲಿರಿಸಿತ್ತು. ಜೊತೆಗೆ , ದೆಹಲಿಯ ಜಿಲ್ಲಾ ನ್ಯಾಯಾಲಯಗಳಲ್ಲಿನ ವಕೀಲರ ಸಂಘಗಳ ಕಾರ್ಯಕಾರಿ ಸಮಿತಿಗಳಲ್ಲಿನ ಶೇ 30ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುವಂತೆ ಸೂಚಿಸಲಾಗಿತ್ತು. ಆದೇಶವನ್ನು ಬಳಿಕ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಕೀಲರ ಸಂಘಕ್ಕೂ ಅನ್ವಯಿಸಲಾಗಿತ್ತು.