CJI NV Ramana, Justices L Nageswara Rao and Surya Kant
CJI NV Ramana, Justices L Nageswara Rao and Surya Kant  
ಸುದ್ದಿಗಳು

ಜೈಲುಗಳಲ್ಲಿ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಅರ್ಹ ಕೈದಿಗಳ ಮರುಬಿಡುಗಡೆ ಅದೇಶಿಸಿದ ಸುಪ್ರೀಂ ಕೋರ್ಟ್

Bar & Bench

ಕೋವಿಡ್‌ ಪ್ರಕರಣಗಳು ವ್ಯಾಪಕವಾಗಿ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿ ತದನಂತರ ಸಾಂಕ್ರಾಮಿಕ ಕಡಿಮೆಯಾದ ಸಂದರ್ಭದಲ್ಲಿ ಮತ್ತೆ ಸೆರೆಮನೆಗೆ ಕಳಿಸಲ್ಪಟ್ಟಿದ್ದ ಎಲ್ಲಾ ಕೈದಿಗಳನ್ನು ತಕ್ಷಣವೇ ಮರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶಗಳು ರಚಿಸಿರುವ ಉನ್ನತಾಧಿಕಾರ ಸಮಿತಿಗೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ.

ಇದಲ್ಲದೆ, ಪ್ರಮಾಣಿತ ಕಾರ್ಯಚರಣಾ ವಿಧಾನ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ತ್ವರಿತವಾಗಿ ಅಳವಡಿಸಿಕೊಂಡು ಹೊಸ ಕೈದಿಗಳನ್ನು ಶೀಘ್ರ ಬಿಡುಗಡೆ ಮಾಡುವಂತೆಯೂ ನ್ಯಾಯಾಲಯ ಸೂಚಿಸಿದೆ.

ಕಳೆದ ವರ್ಷ ಉನ್ನತಾಧಿಕಾರ ಸಮಿತಿಗಳನ್ನು ರಚಿಸದ ರಾಜ್ಯಗಳು ತಕ್ಷಣ ಅವುಗಳನ್ನು ರಚಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಸೂರ್ಯ ಕಾಂತ್ ಅವರಿದ್ದ ವಿಶೇಷ ಪೀಠ ಹೇಳಿತು.

2020ರ ಮಾರ್ಚ್ 23 ರಂದು ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಅನುಗುಣವಾಗಿ ಬಿಡುಗಡೆಯಾಗಿದ್ದ ಎಲ್ಲ ಕೈದಿಗಳನ್ನು ಸೂಕ್ತ ಷರತ್ತು ವಿಧಿಸುವ ಮೂಲಕ ಕೂಡಲೇ ಮರು ಬಿಡುಗಡೆ ಮಾಡಬೇಕು. ಈ ಹಿಂದೆ ನ್ಯಾಯಾಲಯದ ಆದೇಶದಂತೆ ಪೆರೋಲ್‌ ಪಡೆದಿದ್ದ ಕೈದಿಗಳಿಗೆ 90 ದಿನಗಳ ಕಾಲ ಪೆರೋಲ್ ನೀಡಬೇಕು ಎಂದು ಅದು ನಿರ್ದೇಶಿಸಿದೆ.

ಸುಪ್ರೀಂಕೋರ್ಟ್‌ ನೀಡಿರುವ ಇತರೆ ನಿರ್ದೇಶನಗಳು ಹೀಗಿವೆ:

ಅರ್ನೇಶ್‌ ಕುಮಾರ್‌ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ಮಾರ್ಗಸೂಚಿಯ ಅನ್ವಯ ಆರೋಪಿಗಳನ್ನು ಬಂಧಿಸದಂತೆ ಅಧಿಕಾರಿಗಳಿಗೆ ತಡೆ ನೀಡಿ.

ಜೈಲಿನಲ್ಲಿರುವ ಕೈದಿಗಳ ಸಂಖ್ಯೆ ಕುರಿತು ದೆಹಲಿ ಸರ್ಕಾರ ತನ್ನ ಜಾಲತಾಣದಲ್ಲಿ ಅಪ್‌ಡೇಟ್‌ ಮಾಡುತ್ತಿರುತ್ತದೆ. ಅಂತಹ ಕ್ರಮಗಳನ್ನು ಇತರೆ ರಾಜ್ಯಗಳು ಪರಿಗಣಿಸುವ ಅವಶ್ಯಕತೆ ಇದೆ.

ಉನ್ನತಾಧಿಕಾರ ಸಮಿತಿಯ ಎಲ್ಲಾ ನಿರ್ಧಾರಗಳ ಮಾಹಿತಿಯನ್ನು ಪರಿಣಾಮಕಾರಿಯಾಗಿ ಪ್ರಸಾರ ಮಾಡಲು ಅದನ್ನು ಆಯಾ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳು / ರಾಜ್ಯ ಸರ್ಕಾರಗಳು / ಹೈಕೋರ್ಟ್‌ಗಳ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು.

ಕೆಲವು ರಾಜ್ಯಗಳಲ್ಲಿ ಕರ್ಫ್ಯೂ, ಲಾಕ್‌ಡೌನ್‌ ವಿಧಿಸಲಾಗಿದ್ದರೆ ಬಿಡುಗಡೆಯಾದ ಕೈದಿಗಳ ಪ್ರಯಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನಿಯಮಿತವಾಗಿ ಕೋವಿಡ್‌ ಪರೀಕ್ಷೆ ನಡೆಸುವ ಮೂಲಕ ಕಾರಾಗೃಹಗಳಲ್ಲಿ ಸೋಂಕು ನಿಯಂತ್ರಿಸಬೇಕು. ಜೈಲು ಸಿಬ್ಬಂದಿ ಲಭ್ಯ ಇದ್ದು, ಸೆರೆವಾಸಿಗಳಿಗೆ ತಕ್ಷಣ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು.

ನಿತ್ಯ ಜೈಲುಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು.

ಕೆಲವು ಕೈದಿಗಳು ತಮ್ಮ ಸಾಮಾಜಿಕ ಹಿನ್ನೆಲೆ ಮತ್ತು ಮಾರಕ ವೈರಸ್‌ಗೆ ಬಲಿಯಾಗುವ ಭೀತಿಯ ಹಿನ್ನೆಲೆಯಲ್ಲಿ ಬಿಡುಗಡೆ ಇಚ್ಛಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅವರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಸುಪ್ರೀಂಕೋರ್ಟ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.