Supreme Court of India 
ಸುದ್ದಿಗಳು

ಜೆಎಸ್‌ಡಬ್ಲ್ಯೂ ಅರ್ಜಿ ಬಾಕಿ ಹಿನ್ನೆಲೆ: ಭೂಷಣ್ ಪವರ್ ದಿವಾಳಿ ಅರ್ಜಿ ಕುರಿತು ಯಥಾಸ್ಥಿತಿಗೆ ಸುಪ್ರೀಂ ಆದೇಶ

ತೀರ್ಪಿನ ವಿರುದ್ಧ ಜೆಎಸ್‌ಡಬ್ಲ್ಯೂ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ನ್ಯಾಯಾಲಯ ಇದೇ ವೇಳೆ ನಿರ್ದೇಶಿಸಿತು.

Bar & Bench

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಎದುರು ಬಾಕಿ ಇರುವ ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್‌ಗೆ (ಬಿಪಿಎಸ್‌ಎಲ್) ಸಂಬಂಧಿಸಿದ ದಿವಾಳಿ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.

ಮೇ 2ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ದೇಶದ ಪ್ರಮುಖ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಜೆಎಸ್‌ಡಬ್ಲ್ಯೂಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್‌ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ಆದೇಶಿಸಿದೆ.

ಎನ್‌ಸಿಎಲ್‌ಎಟಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಜೆಎಸ್‌ಡಬ್ಲ್ಯೂಗೆ ಹಕ್ಕು ಇರುವದಾಗಿಯೂ ಹಾಗೂ ಮೇಲ್ಮನವಿ ಸಲ್ಲಿಸುವ ಗಡುವು ಇನ್ನೂ ಅಂತ್ಯವಾಗಿಲ್ಲ ಎನ್ನುವ ಜೆಎಸ್‌ಡಬ್ಲ್ಯೂ ಪರ ವಕೀಲರ ವಾದವನ್ನು ಸುಪ್ರೀಂ ಕೋರ್ಟ್‌ ಪರಿಗಣಿಸಿತು. ಈ ಹಂತದಲ್ಲಿ ಬಿಪಿಎಸ್‌ಎಲ್‌ನ ಪ್ರವರ್ತಕರು ಕೋರಿರುವಂತೆ ಸುಪ್ರೀಂ ಕೋರ್ಟ್‌ ಆದೇಶದ ತ್ವರಿತ ಅನುಷ್ಠಾನವು ಮೇಲ್ಮನವಿ ಕೋರಿಕೆಯ ಮನವಿಯನ್ನು ಅತಂತ್ರಗೊಳಿಸಲಿದೆ ಎನ್ನುವ ವಾದವನ್ನು ಪುರಸ್ಕರಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ನೀಡಿತು.

ದಿವಾಳಿ ಪ್ರಕ್ರಿಯೆಯಲ್ಲಿ ಸಿಲುಕಿದ್ದ ಬಿಪಿಎಸ್‌ಎಲ್‌ಅನ್ನು ಕೊಳ್ಳಲು ಮುಂದಾಗಿದ್ದ ಜೆಎಸ್‌ಡಬ್ಲ್ಯೂ ಸಂಸ್ಥೆಯು ಬಿಪಿಎಸ್‌ಎಲ್‌ನ ಸಾಲದಾತ ಕಂಪೆನಿಗಳ ಮುಂದೆ ಇರಿಸಿದ್ದ ₹19,700 ಕೋಟಿಯ ಪರಿಹಾರೋಪಾಯ ಯೋಜನಾ ಪ್ರಸ್ತಾವನೆಯನ್ನು ಮೇ 2ರಂದು ಸುಪ್ರೀಂ ಕೋರ್ಟ್ ಕಾನೂನುಬಾಹಿರವೆಂದು ತಿಳಿಸಿ ತಿರಸ್ಕರಿಸಿತ್ತು. ಅಲ್ಲದೆ, ಬಿಪಿಎಸ್‌ಎಲ್‌ ದಿವಾಳಿ ಪ್ರಕ್ರಿಯೆ ಮುಂದುವರಿಸಲು ನಿರ್ದೇಶನ ನೀಡಿತ್ತು.

ಜೆಎಸ್‌ಡಬ್ಲ್ಯೂ ಸ್ಟೀಲ್‌ ಯೋಜನೆ ಅನುಮೋದಿಸುವಲ್ಲಿ ಸಾಲಗಾರರ ಸಮಿತಿ (ಸಿಒಸಿ) ಎಡವಿದ್ದು ಇದು ದಿವಾಳಿ ಮತ್ತು ದಿವಾಳಿತನ ಪ್ರಕ್ರಿಯೆಯ ಉಲ್ಲಂಘನೆ ಎಂದು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತ್ತು.

2019 ರಲ್ಲಿ, ಹಣಕಾಸು ಸಾಲಗಾರರಿಗೆ ₹19,000 ಕೋಟಿಗೂ ಹೆಚ್ಚು ಹಣ  ಪಾವತಿಸಲು ಮುಂದಾದ ನಂತರ, ಜೆಎಸ್‌ಡಬ್ಲ್ಯೂ ಸ್ಟೀಲ್ ಬಿಪಿಎಸ್‌ಎಲ್‌ ಅನ್ನು ಕೊಳ್ಳಲು ಮುಂದಾಗಿದ್ದ ಯಶಸ್ವಿ ಅರ್ಜಿದಾರನಾಗಿ ಹೊರಹೊಮ್ಮಿತ್ತು. ಸೆಪ್ಟೆಂಬರ್ 2019ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಈ ಯೋಜನೆಯನ್ನು ಅನುಮೋದಿಸಿತು. ಬಿಪಿಎಸ್‌ಎಲ್‌ನ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ ಡಿ) ಎತ್ತಿದ ಕಳವಳ  ಸೇರಿದಂತೆ ಕಾನೂನು ಸವಾಲುಗಳ ಹೊರತಾಗಿಯೂ ಜೆಎಸ್‌ಡಬ್ಲ್ಯೂ ಪ್ರಸ್ತಾವನೆಯನ್ನು ಅನುಮೋದಿಸಿದ್ದ ಎನ್‌ಸಿಎಲ್‌ಟಿ ನಿರ್ಣಯವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಕೂಡ ಎತ್ತಿಹಿಡಿದಿತ್ತು.

ಅನುಮೋದನೆ ಪಡೆದು ವರ್ಷಗಳೇ ಉರುಳಿದರೂ ಜೆಎಸ್‌ಡಬ್ಲ್ಯೂ ಸ್ಟೀಲ್ ಯೋಜನೆಯನ್ನು ಕಾರ್ಯಗತಗೊಳಿಸಿದ ಕಾರಣ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳ ತಲುಪಿತ್ತು. ದಿವಾಳಿ ಸಂಹಿತೆಯ ಉದ್ದೇಶಗಳಿಗೆ ಹಿನ್ನೆಡೆಯಾಗುವ ರೀತಿಯಲ್ಲಿ ಜೆಎಸ್‌ಡಬ್ಲ್ಯೂ ನಡೆದುಕೊಂಡಿರುವುದಾಗಿ ನ್ಯಾಯಾಲಯ ಹೇಳಿತ್ತು. ಸಮಯ ಮಿತಿಯೊಳಗೆ ಪರಿಹಾರೋಪಾಯ ಪ್ರಸ್ತಾವನಾ ಯೋಜನೆಯನ್ನು (ಕೊಳ್ಳುವಿಕೆಯ ಕುರಿತಾದ ಪ್ರಸ್ತಾವನೆ) ಕಾರ್ಯಗತಗೊಳಿಸುವ ಹಾಗೂ ಅಸ್ತಿಗಳ ಮೌಲ್ಯದ ಗರಿಷ್ಠತೆಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಜೆಎಸ್‌ಡಬ್ಲ್ಯೂ ವಿಫಲವಾಗಿದೆ ಎಂದು ನ್ಯಾಯಾಲಯ ಬೆರಳು ಮಾಡಿತ್ತು.