ಸುದ್ದಿಗಳು

ಭತ್ತ ಪಂಜಾಬಿನ ಮೂಲ ಬೆಳೆಯಲ್ಲ, ಬೆಂಬಲ ಬೆಲೆ ಹಿಂಪಡೆದು ಅದನ್ನು ರಾಜ್ಯದಿಂದ ಹಂತ ಹಂತವಾಗಿ ತೆಗೆದುಹಾಕಬೇಕು: ಸುಪ್ರೀಂ

ಕೇಂದ್ರ ಸರ್ಕಾರ ಭತ್ತ ಹೊರತುಪಡಿಸಿ ಪರ್ಯಾಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು ಈ ಹಿಂದಿನ ವಿಚಾರಣೆ ವೇಳೆ ಮನವಿ ಮಾಡಿದ್ದರು.

Bar & Bench

ಪಂಜಾಬ್‌ನಲ್ಲಿ ತಲೆದೋರಿರುವ ಕೃಷಿ ತ್ಯಾಜ್ಯ ಸಮಸ್ಯೆ ಮತ್ತು ರಾಜ್ಯದ ಜಲಸಂಪನ್ಮೂಲದ ಮೇಲೆ ಭತ್ತದ ಕೃಷಿ ಮಾರಕ ಪರಿಣಾಮ ಬೀರುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಭತ್ತದ ಬದಲಿಗೆ ಪರ್ಯಾಯ ಬೆಳೆ ಬೆಳೆಯುವಂತೆರ ಸುಪ್ರೀಂ ಕೋರ್ಟ್‌ ಮಂಗಳವಾರ ಕರೆ ನೀಡಿದೆ.

ಮುಂದಿನ ವರ್ಷವೂ ಕೃಷಿ ತ್ಯಾಜ್ಯ ಸುಡುವಿಕೆಯಿಂದಾಗುವ ವಾಯುಮಾಲಿನ್ಯ ತಡೆಯಲು ಪರ್ಯಾಯ ಬೆಳೆಗಳ ಮೊರೆ ಹೋಗುವುದು ಅಗತ್ಯ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠ ತಿಳಿಸಿದೆ.

ಭತ್ತದ ಬದಲಿಗೆ ಪರ್ಯಾಯ ಬೆಳೆಗಳ ಬೇಸಾಯಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಿದಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ನುಡಿದಿದೆ.

ವಿವಿಧ ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ʼಸ್ಥಳೀಯ ಬೆಳೆ ಅಲ್ಲದʼ ಮತ್ತು ʼಸ್ಥಳೀಯವಾಗಿ ಬಳಕೆ ಮಾಡದʼ ಭತ್ತವು, ಮರುಕಳಿಸುತ್ತಿರುವ ಸಮಸ್ಯೆಯ ಮೂಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಭತ್ತದ ಕೃಷಿಯಿಂದಾಗಿ ರಾಜ್ಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯಲು ಕಾರಣವಾಗಿದೆ. ಭತ್ತದ ಕೃಷಿಯನ್ನು ಹಂತಹಂತವಾಗಿ ಕೈಬಿಟ್ಟು ಪರ್ಯಾಯ ಬೆಳೆಗಳ ಮೊರೆ ಹೋಗಬೇಕು. ಕೇಂದ್ರ ಸರ್ಕಾರ ಭತ್ತ ಹೊರತುಪಡಿಸಿ ಪರ್ಯಾಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ರಾಜ್ಯ ಸರ್ಕಾರದ ನೀತಿಯ ಅಡಿಯಲ್ಲಿ ಕನಿಷ್ಠ ಬೆಂಬಲ ಪಡೆಯುವುದಕ್ಕಾಗಿ ಪಕ್ಕದ ರಾಜ್ಯಗಳಲ್ಲಿ ಬೆಳೆಯುವ ಭತ್ತವನ್ನು ಪಂಜಾಬ್‌ಗೆ ತಂದು ಸೌಲಭ್ಯದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರ ವಾದಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಪಂಜಾಬ್‌  ಅಂತರ್ಜಲ ಕಾಯಿದೆ- 2009ರ ಪಾಲನೆಯಿಂದಾಗಿ ವಾಯು  ಮಾಲಿನ್ಯ ಉಂಟಾಗುತ್ತಿದೆ ಎಂಬುದರ ಬಗ್ಗೆಯೂ ನ್ಯಾಯಾಲಯದ ಗಮನ ಸೆಳೆಯಲಾಯಿತು. ರೈತರು ನಿಗದಿತ ದಿನದ ನಂತರ ಭತ್ತ ಬೆಳೆದರೆ ಕಾಯಿದೆ ಪ್ರಕಾರ ದಂಡ ವಿಧಿಸಲಾಗುತ್ತದೆ. ಹೀಗಾಗಿ ನಿರ್ದಿಷ್ಟ ಅವಧಿಯಲ್ಲೇ ರೈತರು ಭತ್ತ ಕಟಾವು ಮಾಡುವುದರಿಂದ ವಾಯುಮಾಲಿನ್ಯ ತೀವ್ರ ಪ್ರಮಾಣದಲ್ಲಿ ಉಂಟಾಗುತ್ತಿದೆ ಎಂದು ವಿವರಿಸಲಾಯಿತು.

ಕಾಯಿದೆಗೂ ಮುನ್ನ ಭತ್ತವನ್ನು ಬೆಳೆಯಲು ಭಿತ್ತನೆಯನ್ನು ಸ್ವಲ್ಪ ಮೊದಲು ಮಾಡಲಾಗುತ್ತಿತ್ತು. ಹೀಗಾಗಿ ಕಟಾವು ಕೂಡ ಕೆಲ ದಿನ ಮುಂಚಿತವಾಗಿ ನಡೆಯುತ್ತಿತ್ತು. ಆನಂತರ ಕೃಷಿ ತ್ಯಾಜ್ಯವನ್ನು ಸುಡುತ್ತಿದ್ದಾಗ ಆ ವೇಳೆ ಇರುತ್ತಿದ್ದ ಗಾಳಿಯ ಬೀಸು ಮತ್ತು ಹವಾಮಾನದ ಪರಿಸ್ಥಿತಿಯ ಕಾರಣದಿಂದಾಗಿ ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿರಲಿಲ್ಲ. ಪ್ರಸ್ತುತ ಕಾಯಿದೆಯಿಂದಾಗಿ ಬೆಳೆಯ ಕಟಾವು ವಿಳಂಬವಾಗಿ ಹವಾಮಾನ ಪೂರಕವಲ್ಲದ ಸಂದರ್ಭದಲ್ಲಿ ಕೂಳೆಯನ್ನು ಸುಡಲಾಗುತ್ತಿದೆ. ಇದರ ಅಡ್ಡ ಪರಿಣಾಮವನ್ನು ದೆಹಲಿ ಮತ್ತು ಸುತ್ತಲಿನ ಪ್ರದೇಶಗಳು ಅನುಭವಿಸುವಂತಾಗಿದೆ ಎಂದು ಅವರು ಹೇಳಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಈ ಎಲ್ಲ ಅಂಶಗಳನ್ನೂ ಪರಿಗಣಿಸಿ ಸಂಬಂಧಪಟ್ಟವರು ತ್ವರಿತವಾಗಿ ಕಾರ್ಯೋನ್ಮುಖರಾಗಬೇಕಾದ ಅಗತ್ಯತೆಯ ಬಗ್ಗೆ ಒತ್ತಿ ಹೇಳಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

MC_Mehta_vs_Union_of_India___Others.pdf
Preview