Param Bir Singh 
ಸುದ್ದಿಗಳು

ಮಹಾರಾಷ್ಟ್ರ ವೃಂದದಲ್ಲಿ 30 ವರ್ಷ ಸೇವೆ ಸಲ್ಲಿಸಿಯೂ ಅಲ್ಲಿನ ಪೊಲೀಸ್‌ ಮೇಲೆ ವಿಶ್ವಾಸವಿಲ್ಲ ಎನ್ನುತ್ತೀರಲ್ಲ: ಸುಪ್ರೀಂ

“ಗಾಜಿನ ಮನೆಯಲ್ಲಿ ವಾಸಿಸುತ್ತಿರುವವರು ಮತ್ತೊಬ್ಬರತ್ತ ಕಲ್ಲೆಸಯಬಾರದು” ಎಂದು ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಪೀಠವು ಅಭಿಪ್ರಾಯಪಟ್ಟಿತು.

Bar & Bench

ಮಹಾರಾಷ್ಟ್ರದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಅಪರಾಧ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಬೇರಾವುದಾದರೂ ಸ್ವತಂತ್ರ ಸಂಸ್ಥೆಗೆ ವರ್ಗಾಯಿಸುವಂತೆ ಕೋರಿ ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಸಲ್ಲಿಸಿದ್ದ ಮನವಿಯ ವಿಚಾರಣೆಗೆ ಶುಕ್ರವಾರ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಗಾಜಿನ ಮನೆಯಲ್ಲಿ ಕುಳಿತಿರುವವರು ಮತ್ತೊಬ್ಬರ ಮನೆಯತ್ತ ಕಲ್ಲು ತೂರಬಾರದು ಎಂದು ಸುಪ್ರೀಂ ಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಹೇಳಿತು. “ನೀವು ಮಹಾರಾಷ್ಟ್ರ ವೃಂದದ ಭಾಗವಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೀರಿ. ಈಗ ನೀವು ಆ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ ಎಂದು ಹೇಳುತ್ತಿದ್ದೀರಿ. ಇದು ಆಘಾತಕಾರಿ” ಎಂದು ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ವಿಭಾಗೀಯ ಪೀಠ ಹೇಳಿತು.

ಸಿಂಗ್‌ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳಿಗೂ ಸೇರಿದಂತೆ ವಿಸ್ತೃತ ಆದೇಶ (ಬ್ಲಾಂಕೆಟ್‌ ಆರ್ಡರ್‌) ಹೊರಡಿಸಲಾಗದು ಎಂದಿರುವ ಪೀಠವು ಬಾಂಬೆ ಹೈಕೋರ್ಟ್‌ ಅಥವಾ ಸೂಕ್ತ ವೇದಿಕೆಯಲ್ಲಿ ಅವುಗಳ ಬಗ್ಗೆ ಪ್ರಶ್ನಿಸುವಂತೆ ಸಲಹೆ ನೀಡಿದೆ.

“ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ಉದ್ದೇಶಿಸಬೇಕು ಎನ್ನುವುದಾದರೆ ನಾವು ನಿಮ್ಮನ್ನು ಆಲಿಸಿ, ಆದೇಶ ನೀಡುತ್ತೇವೆ. ಇಲ್ಲವಾದರೆ ಮನವಿಯನ್ನು ಹಿಂಪಡೆಯುವ ಸ್ವಾತಂತ್ರ್ಯ ಕಲ್ಪಿಸುತ್ತೇವೆ. ನೀವು ಬಾಂಬೆ ಹೈಕೋರ್ಟ್‌ಗೆ ಹೋಗಬಹುದು” ಎಂದು ಸಿಂಗ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ಅವರಿಗೆ ಪೀಠವು ಹೇಳಿತು.

ತಮ್ಮ ವಿರುದ್ಧದ ಪ್ರಕರಣಗಳನ್ನು ಸಿಬಿಐಗೆ ವರ್ಗಾವಣೆ ಮಾಡುವುದರ ಜೊತೆಗೆ ಮಾರ್ಚ್‌ 17ರಂದು ತಮ್ಮನ್ನು ಮುಂಬೈ ಪೊಲೀಸ್‌ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿರುವುದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದೂ ಪರಮ್‌ ಬೀರ್‌ ಸಿಂಗ್‌ ಅವರು ರಾಜ್ಯ ಸರ್ಕಾರದ ವರ್ಗಾವಣೆ ಆದೇಶವನ್ನೂ ಸಹ ಅರ್ಜಿಯಲ್ಲಿ ಪ್ರಶ್ನಿಸಿದ್ದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು, “ಜೇಠ್ಮಲಾನಿಯವರೇ, ಗಾಜಿನ ಮನೆಯಲ್ಲಿ ಕುಳಿತಿರುವ ವ್ಯಕ್ತಿಗಳು ಮತ್ತೊಬ್ಬರ ಮನೆಯತ್ತ ಕಲ್ಲು ಎಸೆಯಬಾರದು” ಎಂದು ಹೇಳಿತು. ಆಗ ಜೇಠ್ಮಲಾನಿ ಅವರು “ನಾನು (ಪರಮ್‌ ಬೀರ್‌ ಸಿಂಗ್)‌ ಗಾಜಿನ ಮನೆಯಲ್ಲಿ ಕುಳಿತಿದ್ದೇನೆ ಎಂದು ನೀವು ಊಹಿಸಿಕೊಳ್ಳುತ್ತಿದ್ದೀರಿ” ಎಂದರು. ಇದಕ್ಕೆ ಪೀಠವು ಇರಬಹುದು ಎಂದಿತು. ಅಂತಿಮವಾಗಿ ಸಿಂಗ್‌ ಮನವಿ ಹಿಂಪಡೆಯಲು ನಿರ್ಧರಿಸಿದ್ದರಿಂದ ಪೀಠವು ಅದಕ್ಕೆ ಅವಕಾಶ ಮಾಡಿಕೊಟ್ಟಿತು.

ಪರಮ್‌ ಬೀರ್‌ ಸಿಂಗ್‌ ವಿರುದ್ಧದ ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಬಾರದು ಎಂದು ಮತ್ತೊಬ್ಬ ಪೊಲೀಸ್‌ ಅಧಿಕಾರಿ ಭೀಮರಾಜ್‌ ರೋಹಿದಾಸ್‌ ಘಾಡ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಲುವಾಗಿ ಸಿಂಗ್‌ ರಿಟ್‌ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಬಾಂಬೆ ಹೈಕೋರ್ಟ್‌ನಿಂದ ರಕ್ಷಣೆ ಪಡೆದಿರುವ ಸಿಂಗ್‌ ಅವರು ತಮ್ಮ ಇಚ್ಛೆಗೆ ಅನುಸಾರವಾಗಿ ತಮ್ಮ ವಿರುದ್ಧದ ಪ್ರಕರಣಗಳ ವರ್ಗಾವಣೆಗೆ ಸಂಬಂಧಿಸಿದಂತೆ ರಿಟ್‌ ಮನವಿ ಸಲ್ಲಿಸಲಾಗದು ಎಂದಿದ್ದಾರೆ.