Supreme Court of India, Trees 
ಸುದ್ದಿಗಳು

ದೆಹಲಿಯಲ್ಲಿ ಮರಗಳ ಹನನ: ವೃಕ್ಷ ಕಾಯಿದೆಯಡಿ ಅನುಸರಿಸುವ ಕಾರ್ಯವಿಧಾನ ಪರಿಶೀಲಿಸಲಿರುವ ಸುಪ್ರೀಂ ಕೋರ್ಟ್

ತನ್ನ ಸದಸ್ಯರ ಕಾರ್ಯವೈಖರಿ ಮತ್ತು ಮರಗಳನ್ನು ಕಡಿಯಲು ಅವರು ಅನುಸರಿಸುವ ಕಾರ್ಯವಿಧಾನದ ಬಗ್ಗೆ ತಿಳಿಸುವಂತೆ ದೆಹಲಿ ಸರ್ಕಾರದ ವೃಕ್ಷ ಪ್ರಾಧಿಕಾರಕ್ಕೆ ಪೀಠ ನಿರ್ದೇಶಿಸಿದೆ.

Bar & Bench

ರಾಷ್ಟ್ರ ರಾಜಧಾನಿಯಲ್ಲಿ ಮರಗಳನ್ನು ಕಡಿಯಲು ಅನುಸರಿಸಿದ ಕಾರ್ಯವಿಧಾನದ ಬಗ್ಗೆ ದೆಹಲಿ ಸರ್ಕಾರ ಮತ್ತು ವೃಕ್ಷ ಪ್ರಾಧಿಕಾರದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ (ನವೆಂಬರ್ 8) ಕೇಳಿದೆ [ಎಂಸಿ ಮೆಹ್ತಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ದೆಹಲಿಯ ಮರಗಳ ಸಂರಕ್ಷಣೆ ಕಾಯಿದೆ-1994ರ ವ್ಯಾಪ್ತಿಯ ಪ್ರದೇಶಗಳಲ್ಲಿ ಮರ ಕಡಿಯುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕೆಂದು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.  

ತನ್ನ ಸದಸ್ಯರ ಕಾರ್ಯವೈಖರಿ ಮತ್ತು ಮರಗಳನ್ನು ಕಡಿಯಲು ಅವರು ಅನುಸರಿಸುವ ಕಾರ್ಯವಿಧಾನದ ಬಗ್ಗೆ ತಿಳಿಸುವಂತೆ ದೆಹಲಿ ಸರ್ಕಾರದ ವೃಕ್ಷ ಪ್ರಾಧಿಕಾರಕ್ಕೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್‌ ಅವರಿದ್ದ ಪೀಠ ನಿರ್ದೇಶಿಸಿದೆ.

“ವೃಕ್ಷ ಪ್ರಾಧಿಕಾರ ಮತ್ತು ಅದರ ಅಧಿಕಾರಿಗಳು ಯಾವ ವಿಧಾನ ಅನುಸರಿಸಿ ಕಾರ್ಯನಿರ್ವಹಿಸಿದ್ದಾರೆ ಎಂಬ ಕುರಿತು ಮೊದಲು ಆಲಿಸಲಿದ್ದೇವೆ. ನಂತರ ನಾವೇನು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದು ನ್ಯಾಯಮೂರ್ತಿ ಓಕಾ ಮೌಖಿಕವಾಗಿ ಹೇಳಿದರು. ಮುಂದಿನ ವಿಚಾರಣೆ ನವೆಂಬರ್ 22ರಂದು ನಡೆಯಲಿದೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ ದೆಹಲಿ ಪ್ರದೇಶದಲ್ಲಿ ಪ್ರತಿ ಗಂಟೆಗೆ ಸುಮಾರು ಐದು ಮರಗಳನ್ನು ಕಡಿಯಲಾಗುತ್ತದೆ. ಆದ್ದರಿಂದ ಮರಗಳ ಹನನ ನಿಯಂತ್ರಣಕ್ಕಾಗಿ ಸುಪ್ರೀಂ ಕೋರ್ಟ್‌ ಇಲ್ಲವೇ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತಜ್ಞರ ಸಮಿತಿ ರಚಿಸುವಂತೆ ಅರ್ಜಿ ಕೋರಿತ್ತು.

ಎಂಸಿ ಮೆಹ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿದರು. ಬಿಸಿಗಾಳಿಯಿಂದಾಗಿ ದೆಹಲಿಯಲ್ಲಿನ ಭೀಕರ ಸ್ಥಿತಿ ತಡೆಯಲು ಸಮಗ್ರ ವೃಕ್ಷ ಬೆಳೆಸುವ ಅಭಿಯಾನಕ್ಕೆ ಸುಪ್ರೀಂ ಕೋರ್ಟ್‌ ಜೂನ್ 24 ರಂದು ಕರೆ ನೀಡಿತ್ತು.

ದೆಹಲಿಯಲ್ಲಿ ಅಸ್ತಿತ್ವದಲ್ಲಿರುವ ಮರಗಳು ಮತ್ತು ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ದೆಹಲಿ ಸರ್ಕಾರ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಪ್ರಸ್ತುತ ಮನವಿ ಕೋರಿದೆ.

ದೆಹಲಿ ಪರಿಸರ ಸಂರಕ್ಷಣೆ ಕುರಿತಂತೆ ಸಕ್ರಿಯ ಮೇಲ್ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಈ ಹಿಂದೆ ದೆಹಲಿ ಲೆ. ಗವರ್ನರ್‌ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ವಿನಯ್ ಕುಮಾರ್ ಸಕ್ಸೇನಾ, ಉಪಾಧ್ಯಕ್ಷ ಸುಭಾಶಿಶ್ ಪಾಂಡಾ ಹಾಗೂ ವಿವಿಧ ಅಧಿಕಾರಿಗಳಿಗೆ ಛೀಮಾರಿ ಹಾಕಿತ್ತು. ಪಾಂಡಾ ವಿರುದ್ಧ ಮೇ ತಿಂಗಳಲ್ಲಿ ನ್ಯಾಯಾಲಯ ಸ್ವಯಂ ಪ್ರೇರಿತ  ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಿತ್ತು.