ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಸಾಂವಿಧಾನಿಕ ನಿಯಮಾವಳಿ ಜಾರಿಗೊಳಿಸಲು ಕೇಂದ್ರ ಮತ್ತು ನಾಗಾಲ್ಯಾಂಡ್ ಸರ್ಕಾರ ವಿಫಲವಾಗಿದೆ ಎಂದು ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಅದನ್ನು ಜಾರಿಗೆ ತರಬೇಕು ಎಂದು ಪುನರುಚ್ಚರಿಸಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ (ಬಿಜೆಪಿ/ಎನ್‌ಡಿಎ) ಅಧಿಕಾರದಲ್ಲಿದ್ದರೂ ಕೇಂದ್ರ ಏಕೆ ಹೆಚ್ಚಿನ ಶ್ರಮ ವಹಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಪ್ರಶ್ನಿಸಿತು.
"ಕೇಂದ್ರ ಸರ್ಕಾರ ಹಿಂಜರಿಯುತ್ತಿದೆ ಎಂದು ನಮಗೆ ಹೇಳಬೇಡಿ. ಸಾಂವಿಧಾನಿಕ ನಿಬಂಧನೆ ಜಾರಿಯಾಗದೆ ಇರುವೆಡೆ ನೀವು ಏನು ಕ್ರಮ ವಹಿಸಿದ್ದೀರಿ? ನೀವು ಇದರಿಂದ ಸುಮ್ಮನೆ ಕೈ ತೊಳೆದುಕೊಂಡುಬಿಡಲು ನಾವು ಅವಕಾಶ ಕೊಡುವುದಿಲ್ಲ. ಬೇರೆ ರಾಜ್ಯಗಳಲ್ಲಿ ರಾಜ್ಯ ಸರ್ಕಾರ ಪ್ರತಿಕೂಲವಾಗಿರುವ ಕಡೆಗಳಲ್ಲಿ ನೀವು ಕ್ರಮ ಕೈಗೊಂಡಿದ್ದೀರಿ. ಆದರೆ ಇಲ್ಲಿ ಕೇಂದ್ರದ್ದೇ ಪಕ್ಷ (ಬಿಜೆಪಿ) ಅಧಿಕಾರದಲ್ಲಿದೆ. ಕೇಂದ್ರ ಈಗೇನು ಮಾಡಲಿದೆ? ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ನಾವು ಬಿಡೆವು” ಎಂದು ನ್ಯಾಯಾಲಯ ಕಟುಶಬ್ದಗಳಲ್ಲಿ ನುಡಿಯಿತು.
ರಾಜ್ಯದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಬೇಕು ಎಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ ಎಂ ನಟರಾಜ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಭಾರತದಲ್ಲಿ ಕಾನೂನುಗಳು ಸಾಮಾನ್ಯವಾಗಿ ಸಮಾಜ ಸುಧಾರಣೆಗೂ ಒಂದು ಹೆಜ್ಜೆ ಮುಂದಿರುತ್ತವೆ ಎಂದ ನ್ಯಾಯಾಲಯ ಬಹುಪತ್ನಿತ್ವವನ್ನು ಕಾನೂನು ಹೇಗೆ ಕೊನೆಗೊಳಿಸಿತು ಎಂಬುದನ್ನು ಉದಾಹರಣೆಯಾಗಿ ಉಲ್ಲೇಖಿಸಿತು.
ಸಂವಿಧಾನ ಎಲ್ಲರಿಗೂ ಸಮಾನತೆಯನ್ನು ಒದಗಿಸುತ್ತದೆ. ನಾವು ಸಂವಿಧಾನವನ್ನು ಕೂಡ ಜಾರಿಗೆ ತರಬೇಕು. ನೀವು ಆ ಕೆಲಸ ಮಾಡುವುದಾಗಿ ಹೇಳಿ ನಂತರ ಅದರಿಂದ ಹಿಂದೆ ಸರಿದಿದ್ದೀರಿ. 14 ವರ್ಷಗಳಿಂದ ಇದು ಜೀವಾವಧಿ ಶಿಕ್ಷೆಯಂತೆ ಬಾಕಿ ಉಳಿದಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
ಶೇ 33ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಟ್ಟು ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಬೇಕು ಎಂದು ತಾನು ಈ ಹಿಂದೆ ನೀಡಿದ್ದ ನಿರ್ದೇಶನಗಳನ್ನು ಪಾಲಿಸದೇ ಇರುವ ಹಿನ್ನೆಲೆಯಲ್ಲಿ ಹೂಡಲಾಗಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.
ಮೀಸಲಾತಿ ಜಾರಿಗೊಳಿಸಲು ನಾಗಾಲ್ಯಾಂಡ್ ಸರ್ಕಾರಕ್ಕೆ ಕೊನೆಯ ಅವಕಾಶ ನೀಡುತ್ತಿರುವುದಾಗಿ ತಿಳಿಸಿದ ಅದು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿತು.