ಮೀಸಲಾತಿ ವಿಚಾರಣೆಗೆ ಮೇಲ್ಜಾತಿ, ಒಬಿಸಿ ನ್ಯಾಯಮೂರ್ತಿಗಳಿರದ ತಟಸ್ಥ ಪೀಠಕ್ಕೆ ಮನವಿ: ₹ 50,000 ದಂಡ ವಿಧಿಸಿದ ಸುಪ್ರೀಂ

ಇದೇ ಬಗೆಯ ಮನವಿಯನ್ನು ತಿರಸ್ಕರಿಸಿದ್ದ ಮಧ್ಯಪ್ರದೇಶದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಜುಲೈ 17ರಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಪೀಠ ಇದು ನ್ಯಾಯಾಲಯಕ್ಕೆ ಬೆದರಿಕೆ ಒಡ್ಡುವಂತಿದೆ ಎಂದಿತು.
Supreme Court
Supreme Court

ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದ ಮೀಸಲಾತಿ ಪ್ರಕರಣದ ವಿಚಾರಣೆಗಾಗಿ  ಮೇಲ್ಜಾತಿ ಹಾಗೂ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ನ್ಯಾಯಮೂರ್ತಿಗಳಿಲ್ಲದ ವಿಶೇಷ ತಟಸ್ಥ ಪೀಠ ಸ್ಥಾಪಿಸುವಂತೆ ಕೋರಿದ್ದ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್‌ ಈಚೆಗೆ ₹ 50,000 ದಂಡ ವಿಧಿಸಿದೆ [ಲೋಕೇಂದ್ರ ಗುರ್ಜರ್ ಮತ್ತು ಮಧ್ಯಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಇದು ನ್ಯಾಯಾಲಯಕ್ಕೆ ಬೆದರಿಕೆಯ ಹುಕುಂ ಹೊರಡಿಸುವಂತಿದೆ ಎಂದು ತಿಳಿಸಿ ಮಧ್ಯಪ್ರದೇಶ ಹೈಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತ್ತು. ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಜುಲೈ 17ರಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಸರ್ವೋಚ್ಚ ನ್ಯಾಯಾಲಯ ಪೀಠ ವಜಾಗೊಳಿಸಿತು.

Also Read
ಹಂತ ಹಂತವಾಗಿ ಮೀಸಲಾತಿ ರದ್ದತಿ: ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ಅರ್ಜಿದಾರರಿಗೆ ₹ 25 ಸಾವಿರ ದಂಡ

“ಹೈಕೋರ್ಟ್‌ ಆದೇಶದಲ್ಲಿದ್ದ ಏಕೈಕ ದೌರ್ಬಲ್ಯ ಎಂದರೆ ತಾವು ಬಯಸಿದಂತೆ ಪೀಠ ರಚಿಸುವಂತೆ ಕೋರಿದ್ದ ದಾವೆದಾರರ ಮೇಲೆ ಭಾರೀ ದಂಡ ವಿಧಿಸಿರಲಿಲ್ಲ ಎಂಬುದಾಗಿದೆ. ತಪ್ಪು ಗ್ರಹಿಕೆಯಿಂದ ಕೂಡಿದ ವಿಶೇಷ ಅನುಮತಿ ಮನವಿ ಸಲ್ಲಿಸಿದ ಅರ್ಜಿದಾರರಿಗೆ ರೂ. 50,000/- ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ” ಎಂದು ನ್ಯಾಯಾಲಯ ನುಡಿದಿದೆ.

ಮಧ್ಯಪ್ರದೇಶದಲ್ಲಿ ಒಬಿಸಿ ಮೀಸಲಾತಿ ಪ್ರಮಾಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗೆ ವಿಶೇಷ ಪೀಠ ರಚಿಸಲು ಹೈಕೋರ್ಟ್ ವಿಭಾಗೀಯ ಪೀಠ ಮಾರ್ಚ್ 20ರಂದು ನಿರಾಕರಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಅರ್ಜಿ ಸಲ್ಲಿಸಲಾಗಿತ್ತು. ರಾಜ್ಯದಲ್ಲಿ ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ಸುಮಾರು 48 ಅರ್ಜಿಗಳು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿವೆ.

Kannada Bar & Bench
kannada.barandbench.com