ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಇಬ್ಬರು ಸಿಖ್ ಅಭ್ಯರ್ಥಿಗಳ ನೇಮಕ ಮಾಡದ ಕೇಂದ್ರ: ಸುಪ್ರೀಂ ಕೋರ್ಟ್‌ ತಕರಾರು

Bar & Bench

ಇಬ್ಬರು ಸಿಖ್ ವಕೀಲರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡದಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ [ಬೆಂಗಳೂರು ವಕೀಲರ ಸಂಘ ಮತ್ತು ಬರುನ್ ಮಿತ್ರ ಇನ್ನಿತರರ ನಡುವಣ ಪ್ರಕರಣ].

ವಕೀಲರಾದ ಹರ್ಮೀತ್ ಸಿಂಗ್ ಗ್ರೆವಾಲ್ ಮತ್ತು ದೀಪಿಂದರ್ ಸಿಂಗ್ ನಲ್ವಾ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

"ಆಯ್ಕೆಯಾಗದ ಅಭ್ಯರ್ಥಿಗಳಿಬ್ಬರೂ ಸಿಖ್ಖರು. ಈ ಸಮಸ್ಯೆ ಯಾಕೆ ತಲೆದೋರಬೇಕು? ಹಿಂದಿನ ಸಮಸ್ಯೆಗಳನ್ನು ಈಗ ಬಾಕಿ ಇರುವ ವಿಚಾರಕ್ಕೆ ತಳಕು ಹಾಕದಿರಿ." ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

ಗ್ರೆವಾಲ್ ಮತ್ತು ನಲ್ವಾ ಅವರನ್ನು ಅಕ್ಟೋಬರ್ 17 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಇತರ ಮೂವರು ವಕೀಲರ ಹೆಸರುಗಳೊಂದಿಗೆ ನ್ಯಾಯಮೂರ್ತಿಗಳ ಹುದ್ದೆ ನೇಮಕಾತಿಗೆ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ನವೆಂಬರ್ 2ರಂದು ಉಳಿದ ಮೂವರನ್ನಷ್ಟೇ ನೇಮಿಸುವಂತೆ ಅಧಿಸೂಚನೆ ಹೊರಡಿಸಿತ್ತು.

ಇಂದಿನ ವಿಚಾರಣೆ ವೇಳೆ ತನ್ನಿಷ್ಟದಂತೆ ಆಯ್ಕೆ ಮಾಡಿ ನ್ಯಾಯಮೂರ್ತಿಗಳ ವರ್ಗಾವಣೆ ಮಾಡುತ್ತಿರುವ ಕೇಂದ್ರದ ನಡೆಯ ಬಗ್ಗೆಯೂ ಸುಪ್ರೀಂ ಕೋರ್ಟ್‌ ಪ್ರಶ್ನಿಸಿತು.

"ಅಟಾರ್ನಿ ಅವರೇ, ಇದು ಒಳ್ಳೆಯ ಅಭಿಪ್ರಾಯ ನೀಡುವುದಿಲ್ಲ. ನೀವು ಈ ರೀತಿಯ ವರ್ಗಾವಣೆಗಳನ್ನು ಅಳೆದೂ ತೂಗಿ ಮಾಡಲು ಸಾಧ್ಯವಿಲ್ಲ. ನೀವು ನೀಡುತ್ತಿರುವ ಸಂದೇಶ ಎಂಥದ್ದು? ಅಲಾಹಾಬಾದ್‌ನಿಂದ ಒಬ್ಬರು, ದೆಹಲಿಯಿಂದ ಇನ್ನೊಬ್ಬರು, ಗುಜರಾತ್‌ನಿಂದ ನಾಲ್ವರು ಈವರೆಗೆ ವರ್ಗಾವಣೆಯಾಗಿಲ್ಲ" ಎಂದು ನ್ಯಾಯಾಲಯ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರನ್ನು ಉದ್ದೇಶಿಸಿ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಎಜಿ, ಚುನಾವಣೆಯಿಂದಾಗಿ ಸ್ವಲ್ಪ ವಿಳಂಬವಾಗಿದ್ದು ಕೊಲಿಜಿಯಂ ಶಿಫಾರಸು ಮಾಡಿದ್ದ ಹೆಸರುಗಳಿಗೆ ಸಂಬಂಧಿಸಿದಂತೆ ಪ್ರಗತಿ ಸಾಧಿಸಲಾಗಿದೆ ಎಂದರು. ಪ್ರತಿಕ್ರಿಯೆಗೆ ತೃಪ್ತವಾಗದ ನ್ಯಾಯಾಲಯ, ಶೇ 50ರಷ್ಟು ಹೆಸರುಗಳನ್ನು ಸಹ ಇತ್ಯರ್ಥಪಡಿಸಿಲ್ಲ ಎಂದಿತು.

"ನಮಗೆ ಮಾಹಿತಿ ದೊರೆತಿದೆ. ನೀವು (ಕೇಂದ್ರ) ತಡೆ ಹಿಡಿಯುವ ಮೂಲಕ ನ್ಯಾಯಮೂರ್ತಿಗಳ ಸೇವಾ ಹಿರಿತನದ ಮೇಲೆ ಪರಿಣಾಮ ಬೀರುತ್ತಿದ್ದೀರಿ" ಎಂದು ಪೀಠ ಕಳವಳ ವ್ಯಕ್ತಪಡಿಸಿತು.

ವರ್ಗಾವಣೆಗೆ ಶಿಫಾರಸು ಮಾಡಲಾದ ಉಳಿದ ಹನ್ನೊಂದು ಹೆಸರುಗಳಲ್ಲಿ ಐವರನ್ನು ವರ್ಗಾವಣೆ ಮಾಡಲಾಗಿದ್ದು ಆರು ವರ್ಗಾವಣೆಗಳು ಬಾಕಿ ಉಳಿದಿವೆ ಎಂದು ನ್ಯಾಯಾಲಯ ತಿಳಿಸಿದೆ.

ಇತ್ತೀಚೆಗೆ ಮರಳಿ ಶಿಫಾರಸು ಮಾಡಲಾದ ನ್ಯಾಯಮೂರ್ತಿ ಅಭ್ಯರ್ಥಿಗಳಲ್ಲಿ ಎಂಟು ಮಂದಿಯ ನೇಮಕವಾಗಿಲ್ಲ. ಅದರಲ್ಲಿ ಐವರ ಬಗ್ಗೆ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ ಎಂದು ಅದು ಹೇಳಿತು.

"ಇವರಲ್ಲಿ ಕೆಲವರು ಈಗ ನೇಮಕಗೊಂಡಿರುವವರಿಗಂತಲೂ ಹಿರಿಯರು. ಈ ವಿಚಾರವಾಗಿ ನಾವು ಈ ಹಿಂದೆ ಮಾತನಾಡಿದ್ದೇವೆ. (ತಮಗಿಂತಲೂ ಕಿರಿಯರು ಈಗಾಗಲೇ ನೇಮಕವಾಗಿರುವಾಗ) ಹಿರಿಯ ಅಭ್ಯರ್ಥಿಗಳನ್ನು ನ್ಯಾಯಮೂರ್ತಿಗಳಾಗಿ ಎಂದು ಮನವೊಲಿಸುವುದು ಕಷ್ಟವಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯವನ್ನು ನಿರಾಶೆಗೊಳಿಸುವುದಿಲ್ಲ ಎಂದು ಎಜಿ ನ್ಯಾಯಾಲಯಕ್ಕೆ ಭರವಸೆ ನೀಡಿದರು. ಬಳಿಕ ಪೀಠ ಪ್ರಕರಣವನ್ನು ಡಿ. 5ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.

ನ್ಯಾಯಮೂರ್ತಿಗಳ ನೇಮಕಾತಿ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಅಂಶಗಳನ್ನು ತಿಳಿಸಿತು.

ನೇಮಕಾತಿಗಾಗಿ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಅಂತಿಮಗೊಳಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗುತ್ತಿರುವುದು ಎರಡನೇ ನ್ಯಾಯಮೂರ್ತಿಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ ಎಂದು ಸಂಘ ವಾದಿಸಿತ್ತು.