ಹಿಜಾಬ್‌, ಸಂವಿಧಾನದ 370ನೇ ವಿಧಿ ರದ್ದು ವಿಚಾರಣೆ ವಿಳಂಬ: ವ್ಯಕ್ತಿಗತ ಅಹವಾಲನ್ನೂ ಸುಪ್ರೀಂ ನಿರ್ಧರಿಸಬೇಕು ಎಂದ ಸಿಜೆಐ

ಪ್ರಪಂಚದಾದ್ಯಂತ ಸುಪ್ರೀಂ ಕೋರ್ಟ್‌ಗಳು ವಾರ್ಷಿಕವಾಗಿ 180-200 ಪ್ರಕರಣಗಳನ್ನು ನಿರ್ಧರಿಸುತ್ತವೆ. ಇನ್ನೊಂದೆಡೆ ಭಾರತದಲ್ಲಿ ವಾರ್ಷಿಕವಾಗಿ 50,000 ಪ್ರಕರಣಗಳು ದಾಖಲಾಗುತ್ತಿದ್ದು, ಇದರಿಂದ ಸಾಂವಿಧಾನಿಕ ಪೀಠ ರಚಿಸುವುದು ವಿಭಿನ್ನ ಸವಾಲಾಗಿದೆ.
Chief Justice of India DY Chandrachud
Chief Justice of India DY Chandrachud

ಸುಪ್ರೀಂ ಕೋರ್ಟ್‌ ಮುಂದಿರುವ ರಾಜಕೀಯವಾಗಿ ಸೂಕ್ಷ್ಮವಾದ ಹಿಜಾಬ್‌ ನಿಷೇಧ, ಸಂವಿಧಾನದ 370ನೇ ವಿಧಿಯ ರದ್ದು ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ.

ಹಾರ್ವರ್ಡ್‌ ಕಾನೂನು ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಿಜೆಐ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಈ ಕುರಿತು ಅವಲೋಕನ ಮಾಡಿದರು.

“ಟೀಕೆಯ ಬಗ್ಗೆ ನನಗೆ ಅರಿವಿದೆ. ಯಾವುದೇ ಸಂಸ್ಥೆಯ ಮುಖ್ಯಸ್ಥರಾದರೂ ಅವರು ಸಮತೆ ಕಾಯ್ದುಕೊಳ್ಳಬೇಕಾಗುತ್ತದೆ. ಹೌದು, ಒಂದು ಕಡೆ ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಬೇಕಾಗುತ್ತದೆ. ರಾಷ್ಟ್ರದ ದೃಷ್ಟಿಯಲ್ಲಿ ಮಹತ್ವದ ವಿಚಾರಗಳು ಎಂಬ ಅಭಿವ್ಯಕ್ತಿ ಬಳಸಬಹುದು. ವ್ಯಕ್ತಿಗತ ಅಹವಾಲಿನೊಂದಿಗೆ ನ್ಯಾಯ ಕೋರಿ ನ್ಯಾಯಾಲಯದ ಮೆಟ್ಟಿಲೇರುವವರ ಬಗ್ಗೆಯೂ ನ್ಯಾಯಮೂರ್ತಿಗಳಾಗಿ ನಾವು ಗಮನಹರಿಸಬೇಕಾಗುತ್ತದೆ” ಎಂದು ಸಿಜೆಐ ಹೇಳಿದರು.

“ಒಮ್ಮೆ ಸಾಂವಿಧಾನಿಕ ಪೀಠ ರಚಿಸಿದರೆ ಮೂವತ್ತನಾಲ್ಕು ನ್ಯಾಯಮೂರ್ತಿಗಳ ಪೈಕಿ ಏಳು ಮಂದಿ ನ್ಯಾಯಮೂರ್ತಿಗಳು ಕಡಿಮೆಯಾಗುತ್ತಾರೆ. ಜನರ ಅಹವಾಲಿನ ಮಹತ್ವದ ವಿಚಾರಗಳನ್ನು ನಾವು ಏಕಕಾಲಕ್ಕೆ ವಿಚಾರಣೆ ನಡೆಸಬೇಕು. ಕೆಲವರಿಗೆ ವ್ಯಕ್ತಿಗತ ಸ್ವಾತಂತ್ರ್ಯ ನಿರಾಕರಿಸಲಾಗಿರುತ್ತದೆ. ಕೆಲವರು ಜಾಮೀನು ಕೋರಿರುತ್ತಾರೆ. ಮರಣದಂಡನೆಗೆ ಗುರಿಯಾಗಿರುವ ದೋಷಿಯ ಕ್ರಿಮಿನಲ್‌ ಮೇಲ್ಮನವಿ ಆಲಿಸಬೇಕಿದೆ. ಕೊಲೆ ಪ್ರಕರಣದಲ್ಲಿ ಕೆಲವರು ಜೀವಾವಧಿ ಶಿಕ್ಷೆಗೆ ಗುರಿಯಾಗಿರಬಹುದು. ಮಾದಕ ದ್ರವ್ಯ ಸೇವನೆ ವಿರೋಧಿ ಕಾಯಿದೆ ಅಡಿ ಕೆಲವರು ಹದಿನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರಬಹುದು. ಇದು ಅಸಾಮಾನ್ಯವಾದ ಸವಾಲು” ಎಂದು ಸಿಜೆಐ ಹೇಳಿದ್ದಾರೆ.

“ಪ್ರತಿಬಾರಿಯೂ ಎರಡು ಸಾಂವಿಧಾನಿಕ ಪೀಠಗಳನ್ನು ರಚಿಸಬೇಕಿದೆ. ಇಲ್ಲಿ ಹತ್ತು ನ್ಯಾಯಮೂರ್ತಿಗಳನ್ನು ತೆಗೆದರೆ ಬಾಕಿ 24 ನ್ಯಾಯಮೂರ್ತಿಗಳು ಮಾತ್ರ ಉಳಿಯುತ್ತಾರೆ. ತ್ರಿಸದಸ್ಯ ಪೀಠದ ಎಂಟು ಪೀಠಗಳು ವಾರ್ಷಿಕವಾಗಿ 50,000 ಪ್ರಕರಣಗಳ ವಿಚಾರಣೆ ನಡೆಸಬೇಕಾಗುತ್ತದೆ” ಎಂದು ವಿವರಿಸಿದರು.

“ಈ ನಡುವೆ ನಾವು ಸಮಯಾವಕಾಶ ಮಾಡಿಕೊಳ್ಳಬೇಕಿದ್ದು, ಇದರಿಂದ ಸುಪ್ರೀಂ ಕೋರ್ಟ್‌ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸರ್ವೋಚ್ಚ ನ್ಯಾಯಾಲಯವು ಮೇಲ್ಮನವಿ ನ್ಯಾಯಾಲಯವೂ ಆಗಿರುವುದರಿಂದ ಇನ್ನೊಂದು ಬದಿಯ ನ್ಯಾಯದ ಬಗ್ಗೆ ಅವಗಣನೆ ತೋರಲಾಗದು” ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com