Revanth Reddy, Supreme Court  
ಸುದ್ದಿಗಳು

ಕವಿತಾ ಜಾಮೀನು ಪ್ರಶ್ನಿಸಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಸುಪ್ರೀಂ ಛೀಮಾರಿ

“2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಬಿಆರ್‌ಎಸ್‌ ಕೆಲಸ ಮಾಡಿದೆ ಎಂಬುದು ಸತ್ಯ. ಬಿಆರ್‌ಎಸ್‌ ಮತ್ತು ಬಿಜೆಪಿ ನಡುವಿನ ಒಪ್ಪಂದದಿಂದಾಗಿ ಕವಿತಾಗೆ ಜಾಮೀನು ಸಿಕ್ಕಿದೆ ಎಂಬ ಮಾತು ಕೂಡ ಇದೆ”ಎಂದು ರೆಡ್ಡಿ ಹೇಳಿದ್ದರು.

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರಿಗೆ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್‌ ಇತ್ತೀಚಿನ ಆದೇಶದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ನೀಡಿದ್ದ ಹೇಳಿಕೆಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು [ ಗುಂಟಕಂಡ್ಲ ಜಗದೀಶ್ ರೆಡ್ಡಿ ಮತ್ತಿತರರು ಹಾಗೂ ತೆಲಂಗಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಬಿಆರ್‌ಎಸ್ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಡುವಿನ ಒಳ ಒಪ್ಪಂದದಿಂದಾಗಿ ಕವಿತಾ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ದೊರೆತಿದೆ ಎಂಬ ರೆಡ್ಡಿ ಅವರ ಹೇಳಿಕೆಗೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ , ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ನ್ಯಾಯಮೂರ್ತಿಗಳಾದ ವಿಶ್ವನಾಥನ್‌ ಮತ್ತು ಗವಾಯಿ ಅವರಿದ್ದ ಪೀಠವೇ ಕವಿತಾ ಅವರಿಗೆ ಆಗಸ್ಟ್‌ 27ರಂದು ಜಾಮೀನು ನೀಡಿತ್ತು.

“2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಬಿಆರ್‌ಎಸ್ ಕೆಲಸ ಮಾಡಿದೆ ಎಂಬುದು ಸತ್ಯ. ಬಿಆರ್‌ಎಸ್‌ ಮತ್ತು ಬಿಜೆಪಿ ನಡುವಿನ ಒಪ್ಪಂದದಿಂದಾಗಿ ಕವಿತಾಗೆ ಜಾಮೀನು ಸಿಕ್ಕಿದೆ ಎಂಬ ಮಾತು ಕೂಡ ಇದೆ” ಎಂದು ರೇವಂತ್ ರೆಡ್ಡಿ ನಿನ್ನೆ ಹೇಳಿದ್ದರು.

ರೆಡ್ಡಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ವರ್ಗಾವಣೆ ಅರ್ಜಿ ಪ್ರಾಸಂಗಿಕವಾಗಿ ನ್ಯಾಯಮೂರ್ತಿಗಳಾದ ಗವಾಯಿ ಮತ್ತು ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಇಂದು ವಿಚಾರಣೆಗೆ ಬಂದಾಗ, ನ್ಯಾ. ಗವಾಯಿ ಅವರು “ರೆಡ್ಡಿ ಹೇಳಿಕೆ ನೀಡಿದ್ದಾರೆ. ಇಂದು ಬೆಳಿಗ್ಗೆ ಕೂಡ ಅವರು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ 100 ದಿನ ಪೂರೈಸುವ ಹೊತ್ತಿನಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳು ಜವಾಬ್ದಾರಿಯುತ ಮುಖ್ಯಮಂತ್ರಿಯೊಬ್ಬರಿಂದ ಬಂದಿವೆ. ನ್ಯಾಯಾಲಯದ ಸಮಗ್ರತೆಯ ಮೇಲೆ ಸಂಶಯ ಮೂಡಿಸಲು ಪ್ರಯತ್ನಿಸಲಾಗಿದೆ” ಎಂದರು.

ಇದಕ್ಕೆ ದನಿಗೂಡಿಸಿದ ನ್ಯಾ. ವಿಶ್ವನಾಥನ್‌ “ಇವು ಮುಖ್ಯಮಂತ್ರಿ ಹುದ್ದೆಯಲ್ಲಿರುವವರು ನೀಡುವಂತಹ ಜವಾಬ್ದಾರಿಯುತ ಹೇಳಿಕೆಗಳೇ?” ಎಂದು ಪ್ರಶ್ನಿಸಿದರು.

ತೀರ್ಪಿನ ಕುರಿತಂತೆ ಬಂದಿರುವ ಟೀಕೆಗಳ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲವಾದರೂ ನ್ಯಾಯಮೂರ್ತಿಗಳ ಮೇಲೆ ಹಗೆತನ ಸಾಧಿಸುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ನ್ಯಾ. ಗವಾಯಿ ಕಿವಿಹಿಂಡಿದರು.

"ಅವರು ಇಂತಹ ಹೇಳಿಕೆಗಳನ್ನು ನೀಡಲು ಹೇಗೆ ತಾನೆ ಸಾಧ್ಯ? ನಾವು ರಾಜಕೀಯ ಪಕ್ಷವೊಂದರ ಜತೆ ಚರ್ಚಿಸಿ ಆದೇಶ ಹೊರಡಿಸಬೇಕೆ? ನಮ್ಮ ತೀರ್ಪುಗಳನ್ನು ಕೆಲವು ಟೀಕಿಸಿದರೆ ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾರಾದರೂ ಇಷ್ಟಪಡಲಿ, ಪಡದೆ ಇರಲಿ ನಾವು ನಮ್ಮ ಕರ್ತವ್ಯವನ್ನು ಮಾಡುತ್ತೇವೆ," ಎಂದು ನ್ಯಾಯಾಲಯ ಹೇಳಿತು.

ನ್ಯಾಯಾಂಗದಿಂದ ಸದೂರದಲ್ಲಿರುವುದು ಕಾರ್ಯಾಂಗದ ಮೂಲಭೂತ ಕರ್ತವ್ಯ ಎಂದು ನ್ಯಾಯಮೂರ್ತಿ ವಿಶ್ವನಾಥನ್ ಇದೇ ವೇಳೆ ಎಚ್ಚರಿಸಿದರು. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 2ರಂದು ನಡೆಯಲಿದೆ.