Farmers protest, Delhi-Haryana border, Ghazipur 
ಸುದ್ದಿಗಳು

ರೈತರ ಹೆದ್ದಾರಿ ತಡೆ ವಿರುದ್ಧ ಹೂಡಲಾಗಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ರೈತರ ಬೇಡಿಕೆಗಳು ಮತ್ತು ಅಹವಾಲುಗಳನ್ನು ಪರಿಶೀಲಿಸಲು ಪಂಜಾಬ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸಮಿತಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ರಚಿಸಿತ್ತು.

Bar & Bench

ದೆಹಲಿಗೆ ಸಂಪರ್ಕ ಕಲ್ಪಿಸುವ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯ ಬಳಿ ರೈತರು ಪ್ರತಿಭಟನಾರ್ಥ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆಯುವುದರ ವಿರುದ್ಧ ನಿರ್ದೇಶನ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ [ಗೌರವ್‌ ಲೂಥ್ರಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ರೈತರ ಪ್ರತಿಭಟನೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಹೀಗಿರುವಾಗ, ಈ ಮನವಿ ಏಕೆ ಸಲ್ಲಿಸಲಾಗಿದೆ. ಇದು ತಪ್ಪು ಅಭಿಪ್ರಾಯ ನೀಡುತ್ತದೆ. ನ್ಯಾಯಾಲಯ ಕೆಲವು ಕ್ರಮ ಕೈಗೊಂಡಿದ್ದರೂ ನೀವಿಲ್ಲಿಗೆ ಬಂದಿದ್ದೀರಿ ಎಂದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಮನಮೋಹನ್ ಅವರಿದ್ದ ವಿಭಾಗೀಯ ಪೀಠ ರೈತರ ಬೇಡಿಕೆಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಿರುವ ಪ್ರಕರಣವನ್ನು ಉಲ್ಲೇಖಿಸಿ ಅಸಮಾಧಾನ ವ್ಯಕ್ತಪಡಿಸಿತು.

ರೈತರ ಬೇಡಿಕೆಗಳು ಮತ್ತು ಅಹವಾಲುಗಳನ್ನು ಪರಿಶೀಲಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನವಾಬ್ ಸಿಂಗ್ ನೇತೃತ್ವದ ಸಮಿತಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ರಚಿಸಿತ್ತು.

ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಒದಗಿಸುವ ಕಾಯಿದೆ ಜಾರಿಗೆ ತರಬೇಕು ಸಾಲ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶಂಭು ಗಡಿಯಲ್ಲಿ ಭಾನುವಾರ ಹರಿಯಾಣ ಪೊಲೀಸರು ರೈತರ ವಿರುದ್ಧ ಅಶ್ರುವಾಯು ಶೆಲ್‌ ಸಿಡಿಸಿದ ಹಿನ್ನೆಲೆಯಲ್ಲಿ ರೈತರ ದೆಹಲಿ ಯಾತ್ರೆ ಸ್ಥಗಿತಗೊಂಡಿದೆ. ಕಳೆದ ಶುಕ್ರವಾರದಿಂದಲೇ ರೈತರು ದೆಹಲಿಯತ್ತ ಪಾದಯಾತ್ರೆ ಆರಂಭಿಸಿದ್ದರು.

ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೇ ಹಳಿಗಳ ಮೇಲೆ ರೈತರು ತಡೆ ಒಡ್ಡುವುದನ್ನು ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತ ಮತ್ತು ಪಂಜಾಬ್‌ನ ನಿವಾಸಿ ಗೌರವ್ ಲೂಥ್ರಾ ಅವರು ಸಲ್ಲಿಸಿದ್ದ ಮನವಿಯನ್ನು ಇಂದು ಕೈಗೆತ್ತಿಕೊಂಡ  ಸುಪ್ರೀಂ ಕೋರ್ಟ್‌ ಅರ್ಜಿ ತಿರಸ್ಕರಿಸಿತು.

ಪಂಜಾಬ್ ರಾಜ್ಯವನ್ನು ಅಸ್ಥಿರಗೊಳಿಸಲು ರೈತರು ಮತ್ತು ರೈತ ಸಂಘಗಳನ್ನು ಬಳಸಿಕೊಳ್ಳುವುದಕ್ಕಾಗಿ ವಿದೇಶಿಗರು, ಬಾಹ್ಯಶಕ್ತಿಗಳು ಹಾಗೂ ದೇಶ ವಿರೋಧಿ ಶಕ್ತಿಗಳು ಮುಂದಾಗಿವೆ ಎಂದು ಲೂಥ್ರಾ ಆರೋಪಿಸಿದ್ದರು.

ವಾದ ಆಲಿಸಿದ ಸರ್ವೋಚ್ಚ ನ್ಯಾಯಾಲಯ ಅರ್ಜಿ ಪ್ರಚಾರ ಹಿತಾಸಕ್ತಿ ಹೊಂದಿರುವಂತೆ ತೋರುತ್ತಿದೆ ಎಂದಿತು. ಅರ್ಜಿ ವಜಾಗೊಳಿಸಿದ ಅದು ಬಾಕಿ ಇರುವ ಮುಖ್ಯ ಪ್ರಕರಣದಲ್ಲಿ ಸಹಾಯ ಮಾಡಲು ಅರ್ಜಿದಾರರಿಗೆ ಸ್ವಾತಂತ್ರ್ಯ ಇದೆ ಎಂದಿತು.