Supreme Court  
ಸುದ್ದಿಗಳು

ಸಾಮಾಜಿಕ ಮತ್ತು ಜಾತಿ ಆಧಾರಿತ ಜನಗಣತಿ: ಅರ್ಜಿ ಪರಿಗಣಿಸದ ಸುಪ್ರೀಂ ಕೋರ್ಟ್

ಇದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರವಾಗಿದ್ದು ಇದರಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್‌ ಭಟ್ಟಿ ಅವರಿದ್ದ ಪೀಠ ತಿಳಿಸಿತು.

Bar & Bench

ಸಾಮಾಜಿಕ ಮತ್ತು ಜಾತಿ ಆಧಾರಿತ ಜನಗಣತಿ ನಡೆಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಇದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರವಾಗಿದ್ದು ಇದರಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ ವಿ ಎನ್‌ ಭಟ್ಟಿ ಅವರಿದ್ದ ಪೀಠ ತಿಳಿಸಿತು.

"94 ದೇಶಗಳು ಸಾಮಾಜಿಕ ಮತ್ತು ಜಾತಿ ಆಧಾರಿತ ಜನಗಣತಿ ನಡೆಸಿವೆ. ಭಾರತದಲ್ಲಿ ಇನ್ನಷ್ಟೇ ಅದು ನಡೆಯಬೇಕಿದೆ. ಈ ಗಣತಿಯನ್ನು ಆಗಾಗ್ಗೆ ಮಾಡಬೇಕು ಎಂದು ಇಂದ್ರಾ ಸಾಹ್ನಿ ತೀರ್ಪಿನಲ್ಲಿ ಹೇಳಲಾಗಿದೆ" ಎಂದು ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯಿಸಿದರು. ಆಗ ಇದು ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರ ಎಂದ ನ್ಯಾಯಾಲಯ ಅರ್ಜಿ ವಜಾಗೊಳಿಸಲು ಮುಂದಾಯಿತು. ಈ ಹಂತದಲ್ಲಿ ಅರ್ಜಿದಾರರು ಮನವಿ ಹಿಂಪಡೆದರು.  

1992ರಲ್ಲಿ ಪ್ರಕಟವಾದ ಮಹತ್ವದ ಇಂದ್ರಾ ಸಾಹ್ನಿ ತೀರ್ಪು ಹಿಂದುಳಿದ ಜಾತಿಗಳಿಗೆ ಮೀಸಲಾತಿ ಒದಗಿಸುವುದರ ಸಿಂಧುತ್ವ ಎತ್ತಿಹಿಡಿಯಿತು. ಇದೇ ವೇಳೆ ತೀರ್ಪು ಒಟ್ಟು ಮೀಸಲಾತಿಗೆ ಶೇ 50ರ ಮಿತಿ ವಿಧಿಸಿತ್ತು. 2021ರಲ್ಲಿ ಮರಾಠ ಮೀಸಲಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಮತ್ತೆ ಎತ್ತಿಹಿಡಿದಿತ್ತು.

ಜಾತಿ ಗಣತಿ ನಡೆಸುವ ವಿಷಯ ಇತ್ತೀಚಿನ ವರ್ಷಗಳಲ್ಲಿ ಚರ್ಚೆ ಮತ್ತು ರಾಜಕೀಯ ವಿವಾದಕ್ಕೆ ತುತ್ತಾಗಿದೆ. ಗಣತಿ ನಡೆಸುವ ಬಿಹಾರ ಸರ್ಕಾರದ ನಿರ್ಧಾರವನ್ನು ಈ ಹಿಂದೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಆಗಸ್ಟ್ 2023ರಲ್ಲಿ, ಪಾಟ್ನಾ ಹೈಕೋರ್ಟ್ ಬಿಹಾರದಲ್ಲಿ ಜಾತಿ ಸಮೀಕ್ಷೆ ನಡೆಸುವ ನಿರ್ಧಾರವನ್ನು ಎತ್ತಿಹಿಡಿಯಿತಾದರೂ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಕೂಡಲೇ ಪ್ರಶ್ನಿಸಲಾಯಿತು . ಅದಕ್ಕೆ ಸಂಬಂಧಿಸಿದ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.

ಉದ್ಧವ್‌ ಠಾಕ್ರೆ ನೇತೃತ್ವದ ಈ ಹಿಂದಿನ ಸರ್ಕಾರ ಮಹಾರಾಷ್ಟ್ರದಲ್ಲಿ ಜಾತಿ ಗಣತಿಗೆ ಯತ್ನಿಸಿತ್ತು. ಅದಕ್ಕೆ ಅನುಗುಣವಾಗಿ 2011ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಜನಗಣತಿಯ ವಿವರಗಳನ್ನು ಬಹಿರಂಗಪಡಿಸಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು.