Supreme Court
Supreme Court 
ಸುದ್ದಿಗಳು

ಎನ್‌ಸಿಐಎಸ್‌ಎಂ ಕಾಯಿದೆಯಿಂದ ಯೋಗ ಹೊರಗಿಟ್ಟಿದ್ದನ್ನು ಪ್ರಶ್ನಿಸಿದ್ದ ಅರ್ಜಿ ಪರಿಗಣಿಸಲು ಸುಪ್ರೀಂ ನಕಾರ

Bar & Bench

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಭಾರತೀಯ ಔಷಧ ಪದ್ದತಿಯ ರಾಷ್ಟ್ರೀಯ ಆಯೋಗ ಕಾಯಿದೆ- 2020ರ ವ್ಯಾಪ್ತಿಯಿಂದ ಹೊರಗಿಡುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಇದು ಸರ್ಕಾರದ ನೀತಿ ನಿರ್ಧಾರಕ ವಿಚಾರವಾಗಿದ್ದು ನ್ಯಾಯಾಲಯ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ತಿಳಿಸಿದೆ.

"ಇವೆಲ್ಲವೂ ನೀತಿ ನಿರ್ಧಾರಕ ವಿಚಾರಗಳು. ನಾವು ಇದರ ವಿಚಾರಣೆ ನಡೆಸುವುದಿಲ್ಲ, ಕೆಲವರು ಇದನ್ನು ಪ್ರೋತ್ಸಾಹಿಸಬಹುದು, ಇತರರು ಒಪ್ಪದೇ ಇರಬಹುದು. ಇದು ಸರ್ಕಾರದ ಪರಿಗಣನೆಗೆ ಬಿಟ್ಟದ್ದು. ನಾವು ಈ ಅರ್ಜಿಯ ಸಂಬಂಧ ನೋಟಿಸ್ ಅಥವಾ ನಿರ್ದೇಶನಗಳನ್ನು ನೀಡುವುದಿಲ್ಲ," ಎಂದು ನ್ಯಾಯಾಲಯ ಹೇಳಿದೆ.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಎನ್‌ಸಿಐಎಸ್‌ಎಂ ಕಾಯಿದೆಯಿಂದ ಹೊರಗಿಡುವ ನಿರ್ಧಾರ ನಿರಂಕುಶವಾದದು ಮತ್ತು ಸರ್ಕಾರದ ಈ ಹಿಂದಿನ ನಿರ್ಧಾರಕ್ಕೆ ವಿರುದ್ಧ  ಎಂದು ಭಾರತೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದವೀಧರ ವೈದ್ಯಕೀಯ ಸಂಘ ಸಲ್ಲಿಸಿದ್ದ ಮನವಿಯಲ್ಲಿ ಹೇಳಲಾಗಿತ್ತು.

ಭಾರತದಲ್ಲಿನ ಇತರ ಮಾನ್ಯತೆ ಪಡೆದ ವೈದ್ಯಕೀಯ ವ್ಯವಸ್ಥೆಗಳಿಗೆ ಒದಗಿಸಿರುವಂತೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಗೂ ವೈದ್ಯಕೀಯ ಶಿಕ್ಷಣ ಮತ್ತು ಕ್ಲಿನಿಕಲ್ ಪ್ರಾಕ್ಟೀಸ್‌ ಮಾಡಲು ಸಮಾನ ಶಾಸನಾತ್ಮಕ ಅವಕಾಶ ನೀಡಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಎಂದು ಅರ್ಜಿದಾರರು ಕೋರಿದ್ದರು.