ಸುದ್ದಿಗಳು

ರಾಜ್ಯ ಗ್ರಾಹಕರ ವೇದಿಕೆಯ ಸದಸ್ಯರಾಗಲು 20 ವರ್ಷಗಳ ಅನುಭವ ರದ್ದತಿ: ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ

Bar & Bench

ರಾಜ್ಯ ಮತ್ತು ಜಿಲ್ಲಾ ಗ್ರಾಹಕರ ವೇದಿಕೆಗಳ ಸದಸ್ಯರಾಗಲು ಸಂಬಂಧಿತ ಕ್ಷೇತ್ರಗಳಲ್ಲಿ 10 ವರ್ಷಗಳ ಅನುಭವ ಇರುವ ವಕೀಲರು ಮತ್ತಿತರ ವೃತ್ತಿಪರರಿಗೆ ಅನುವು ಮಾಡಿಕೊಟ್ಟಿದ್ದ ಮಾರ್ಚ್ 2023ರ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮತ್ತು ಡಾ. ಮಹೀಂದ್ರಾ ಭಾಸ್ಕರ್ ಲಿಮಾಯೆ ಇನ್ನಿತರರ ನಡುವಣ ಪ್ರಕರಣ].

ತೀರ್ಪನ್ನು  ಮರುಪರಿಶೀಲಿಸಲು ಕೋರಲಾಗಿದ್ದು, ದಾಖಲೆಯಲ್ಲಿ ಯಾವುದೇ ನಿರ್ದಿಷ್ಟ ದೋಷ ಕಂಡುಬಂದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಅದು ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿತು.

ರಾಜ್ಯ ಮತ್ತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಸಂಬಂಧಿಸಿದ ಗ್ರಾಹಕ ಸಂರಕ್ಷಣಾ ನಿಯಮಾವಳಿ, 2020ರ ನಿಬಂಧನೆಗಳನ್ನು ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್ ಮಾರ್ಚ್ 3 ರಂದು ಎತ್ತಿಹಿಡಿದಿತ್ತು.

ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ನೇಮಕಗೊಳ್ಳಲು ಅಭ್ಯರ್ಥಿಯು ಕನಿಷ್ಠ 20 ವರ್ಷಗಳ ಅನುಭವ ಮತ್ತು ಜಿಲ್ಲಾ ಆಯೋಗಕ್ಕೆ ನೇಮಕಗೊಂಡವರಿಗೆ ಕನಿಷ್ಠ 15 ವರ್ಷಗಳ ಅನುಭವವನ್ನು ಹೊಂದಿರಬೇಕು ಎಂಬ ನಿಯಮಗಳನ್ನು ಹೈಕೋರ್ಟ್ ಬದಿಗೆ ಸರಿಸಿತ್ತು.  

ಇತ್ತ ಆದೇಶ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌ ಅಂತಹ ನೇಮಕಾತಿಗಾಗಿ ಹೊಸ ಕಾನೂನನ್ನು ಜಾರಿಗೊಳಿಸುವವರೆಗೆ ಈ ಗ್ರಾಹಕರ ವೇದಿಕೆಗಳಿಗೆ ಎರಡು ಲಿಖಿತ ದಾಖಲೆಗಳ ಮೂಲಕ ಆಯ್ಕೆ ಮಾಡಬೇಕು ಎಂದು ಹೇಳಿತ್ತು. ಈ ಆದೇಶವನ್ನು ಮರುಪರಿಶೀಲಿಸುವಂತೆ ಪ್ರಸ್ತುತ ಮನವಿ ಕೋರಿತ್ತು.