CJI DY Chandrachud, Justice JB Pardiwala, Justice Manoj Misra
CJI DY Chandrachud, Justice JB Pardiwala, Justice Manoj Misra  
ಸುದ್ದಿಗಳು

ಅಸ್ಸಾಂ ಕ್ಷೇತ್ರ ಮರುವಿಂಗಡಣೆಗೆ ಇಲ್ಲ ತಡೆ: ಆರ್‌ಪಿ ಕಾಯಿದೆಯ ಸೆಕ್ಷನ್ 8ಎ ಸಿಂಧುತ್ವ ಪರಿಶೀಲಿಸಲು ಸುಪ್ರೀಂ ಸಮ್ಮತಿ

Bar & Bench

ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ [ಹಿರೇಂದ್ರನಾಥ್ ಗೊಹೈನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಈ ಹಂತದಲ್ಲಿ ಪ್ರಕ್ರಿಯೆಯನ್ನು ತಡೆಹಿಡಿಯುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿತು.

ಈ ಹಂತದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಗೆ ತಡೆಯುವುದು ಸರಿಯಲ್ಲ. ಹೀಗಾಗಿ ಸಾಂವಿಧಾನಿಕ ಸವಾಲನ್ನು ಕಾಯ್ದಿರಿಸುತ್ತಾ ಯಾವುದೇ ಮುಂದಿನ ಕ್ರಮ ಕೈಗೊಳ್ಳದಂತೆ ಚುನಾವಣಾ ಆಯೋಗವನ್ನು ನಿರ್ಬಂಧಿಸುವಂತಹ ಯಾವುದೇ ಆದೇಶ ನೀಡುವುದಿಲ್ಲ ಎಂದು ಅದು ಆದೇಶದಲ್ಲಿ ತಿಳಿಸಿದೆ.

ಆದರೂ ಪ್ರಜಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8ಎ ಸಿಂಧುತ್ವವನ್ನು ಪರಿಶೀಲಿಸಲು ಸಮ್ಮತಿಸಿರುವ ಸುಪ್ರೀಂ ಕೋರ್ಟ್‌ ಈ ಸಂಬಂಧ ಕೇಂದ್ರ ಮತ್ತು ಅಸ್ಸಾಂ ಸರ್ಕಾರಗಳಿಗೆ ನೋಟಿಸ್‌ ನೀಡಿತು.  ಈ ವಿಚಾರ ಪರಿಶೀಲನೆಗೆ ಅರ್ಹ ಎಂದು ಅದು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು.

ಅಸ್ಸಾಂನಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆರಂಭಿಸುವ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಅಸ್ಸಾಮಿ ಮಾರ್ಕ್ಸ್‌ವಾದಿ ಚಿಂತಕ ಹಿರೇನ್ ಗೊಹೈನ್ ಹಾಗೂ ರಾಜ್ಯಸಭಾ ಸದಸ್ಯ ಅಜಿತ್ ಭುಯಾನ್ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತು.