Bhupesh Baghel and Supreme Court Facebook
ಸುದ್ದಿಗಳು

ಪಿಎಂಎಲ್ಎ ಸೆಕ್ಷನ್ 44 ಪ್ರಶ್ನಿಸಿ ಭೂಪೇಶ್ ಬಘೇಲ್ ಸಲ್ಲಿಸಿದ್ದ ಅರ್ಜಿ ಆಲಿಸಲು ಸುಪ್ರೀಂ ನಕಾರ

ಪಿಎಂಎಲ್ಎ ಪ್ರಕರಣಗಳಲ್ಲಿ ಇ ಡಿ ಕೆಲವು ತಿಂಗಳಿಗೊಮ್ಮೆ ಪೂರಕ ದೂರು ಸಲ್ಲಿಸುತ್ತಿರುವುದರಿಂದ ವಿಚಾರಣೆ ವಿಳಂಬವಾಗುತ್ತದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.

Bar & Bench

ಹಣ ವರ್ಗಾವಣೆ ಪ್ರಕರಣಗಳಲ್ಲಿ ಮೂಲ ದೂರು ದಾಖಲಿಸಿದ ಬಳಿಕ ಸಲ್ಲಿಸಲಾಗುವ ಹೆಚ್ಚುವರಿ ದೂರುಗಳ ಆಧಾರದ ಮೇಲೆ ಪಿಎಂಎಲ್‌ಎ ಸೆಕ್ಷನ್‌ 44ರ ಅಡಿ ದೊರೆತಿರುವ ಅಧಿಕಾರ ಬಳಸಿ ತನಿಖೆ ನಡೆಸುವ ಜಾರಿ ನಿರ್ದೇಶನಾಲಯದ (ಇ ಡಿ) ಅಧಿಕಾರ ಪ್ರಶ್ನಿಸಿ  ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ [ಭೂಪೇಶ್ ಕುಮಾರ್ ಬಘೇಲ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸೆಕ್ಷನ್‌ಗಳಲ್ಲಿ ತಪ್ಪು ಇಲ್ಲ. ಆದರೆ ಅದರ ದುರಪಯೋಗವಾಗುತ್ತಿದ್ದರೆ ಬಾಧಿತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯಮಲ್ಯ ಬಾಗ್ಚಿ ಅವರಿದ್ದ ಪೀಠ ಸಲಹೆ ನೀಡಿತು.

ಸಮಸ್ಯೆ ಇರುವುದು ಕಾನೂನಿನಲ್ಲಿ ಅಲ್ಲ ಬದಲಿಗೆ ಅದರ ದುರುಪಯೋಗದಲ್ಲಿ ಎಂದು ನ್ಯಾ. ಬಾಗ್ಚಿ ಅವಲೋಕಿಸಿದರು. ಈ ಮಾತಿಗೆ ತಲೆದೂಗಿದ ನ್ಯಾಯಮೂರ್ತಿ ಕಾಂತ್ "ಈ ಸೆಕ್ಷನ್‌ಗಳಲ್ಲಿ ಯಾವುದೇ ತಪ್ಪಿಲ್ಲ. ಅದು ದುರುಪಯೋಗವಾಗುತ್ತಿದ್ದರೆ, ಹೈಕೋರ್ಟ್‌ ಮುಂದೆ ಹೋಗಿ" ಎಂದರು.

ಪಿಎಂಎಲ್‌ಎ ಸೆಕ್ಷನ್ 44 ರದ್ದುಗೊಳಿಸುವಂತೆ ತಮ್ಮ ಅರ್ಜಿಯಲ್ಲಿ, ಬಘೇಲ್‌ ಅವರು ಕೋರಿದ್ದರು. ಅಸಾಧಾರಣ ಸಂದರ್ಭಗಳಲ್ಲಿ ಮತ್ತು ನ್ಯಾಯವ್ಯಾಪ್ತಿಯ ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ಹಾಗೂ ಸೂಕ್ತ ಸುರಕ್ಷತಾ ಕ್ರಮ ಪಾಲಿಸಿದ ನಂತರವಷ್ಟೇ ಮೂಲ ದೂರು ದಾಖಲಾದ ನಂತರದ ಹೆಚ್ಚುವರಿ ತನಿಖೆ ನಡೆಸಲು ಇ ಡಿ ಅಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ಘೋಷಿಸುವಂತೆ ನೀಡುವಂತೆ ಅವರು ಕೋರಿದ್ದರು.

ಭೂಪೇಶ್ ಬಘೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಛತ್ತೀಸ್‌ಗಢದಲ್ಲಿ ₹2,000 ಕೋಟಿ ಮೌಲ್ಯದ ಮದ್ಯದ ದಂಧೆ ನಡೆದಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ದಂಧೆ ನಡೆಸಿದ್ದ ಜಾಲವು ಸರ್ಕಾರಿ ಮದ್ಯದ ಅಂಗಡಿಗಳ ಮೂಲಕ ಅಕ್ರಮ ಕಮಿಷನ್ ಸಂಗ್ರಹಿಸಿ ಲೆಕ್ಕವಿಲ್ಲದ ಮದ್ಯವನ್ನು ಮಾರಾಟ ಮಾಡಿದೆ ಎಂದು ಇ ಡಿ ವಾದಿಸಿತ್ತು.

ಇಂದು ಅರ್ಜಿಯ ವಿಚಾರಣೆ ವೇಳೆ ಬಘೇಲ್‌ ಪರ  ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ಪಿಎಂಎಲ್ಎ ಪ್ರಕರಣಗಳಲ್ಲಿ ಇ ಡಿ ಕೆಲವು ತಿಂಗಳಿಗೊಮ್ಮೆ ಪೂರಕ ದೂರು ಸಲ್ಲಿಸುತ್ತಿರುವುದರಿಂದ ವಿಚಾರಣೆ ವಿಳಂಬವಾಗುತ್ತದೆ ಎಂದರು. ಆದರೆ ಇದನ್ನು ಒಪ್ಪದ ನ್ಯಾ. ಕಾಂತ್‌, ಪೂರಕ ತನಿಖೆಯಿಂದ ಆರೋಪಿಗಳಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾ. ಬಾಗ್ಚಿ ಅವರು ಹೆಚ್ಚಿನ ತನಿಖೆಗಾಗಿ ಇ ಡಿಯು ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದರು.  ಆದರೆ ಸಾಕಷ್ಟು ವೇಳೆ ಇ ಡಿ ಹಾಗೆ ಮಾಡುವುದಿಲ್ಲ ಎಂದು ಸಿಬಲ್‌ ಹೇಳಿದರು. ಆಗ ನ್ಯಾಯಾಲಯ “ಅಂದರೆ ಸಮಸ್ಯೆ ಅಲ್ಲಿದೆ, ಕಾಯಿದೆಯ ಸೆಕ್ಷನ್‌ ಸಮಸ್ಯೆಯಲ್ಲ” ಎಂದಿತು.

ಬಘೇಲ್‌ ಅವರು ಹೈಕೋರ್ಟ್ ಸಂಪರ್ಕಿಸಲು ಸ್ವತಂತ್ರರು ಎಂದು ಅಂತಿಮವಾಗಿ ಹೇಳಿದ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತು. ವಿಜಯ್ ಮದನ್‌ಲಾಲ್‌ ಚೌಧರಿ ಪ್ರಕರಣದಲ್ಲಿ ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ಹೆಚ್ಚಿನ ಸಾಕ್ಷ್ಯಗಳನ್ನು ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ ಎಂದು ಅದು ತಿಳಿಸಿತು.

"ಇ ಡಿ ಈ ಪ್ರಕ್ರಿಯೆಗಳಿಗೆ ವಿರುದ್ಧವಾಗಿ ವರ್ತಿಸಿದ್ದರೆ, ಆರೋಪಿ ಯಾವಾಗ ಬೇಕಾದರೂ ಹೈಕೋರ್ಟ್ ಸಂಪರ್ಕಿಸಬಹುದು " ಎಂದು ನ್ಯಾಯಾಲಯ ನುಡಿಯಿತು.