ಕಳೆದ ವಿಧಾನಸಭಾ ಚುನಾವಣೆಯಲ್ಲಿನ ತಮ್ಮ ಆಯ್ಕೆಯನ್ನು ಪ್ರಶ್ನಿಸಿರುವ ಅರ್ಜಿಯಲ್ಲಿನ ಅಸ್ಪಷ್ಟ ಆರೋಪಗಳನ್ನು ಕೈಬಿಡಲು ಕೋರಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನಡೆಸಲು ಶುಕ್ರವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ ಎನ್ ಜೀವರಾಜ್ ಸಲ್ಲಿಸಿರುವ ಚುನಾವಣಾ ಅರ್ಜಿಯು ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟಿದೆ.
ರಾಜೇಗೌಡ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು “ಚುನಾವಣೆಯಲ್ಲಿ ರಾಜೇಗೌಡ ಕಪ್ಪು ಹಣ ಬಳಕೆ ಮಾಡಿದ್ದಾರೆ ಎಂದು ಆಧಾರರಹಿತವಾಗಿ ಚುನಾವಣಾ ಅರ್ಜಿಯಲ್ಲಿ ಆರೋಪಿಸಿದ್ದಾರೆ” ಎಂದು ಆಕ್ಷೇಪಿಸಿದರು.
ಇದನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ವಿಭಾಗೀಯ ಪೀಠವು ಅರ್ಜಿ ವಿಚಾರಣೆಗೆ ಪರಿಗಣಿಸಲು ನಿರಾಕರಿಸಿತು.
“ಆಧಾರರಹಿತ ಆರೋಪಗಳ ಬಗ್ಗೆ ನಾವು ಕಳಕಳಿ ಹೊಂದಿದ್ದೇವೆ. ಆದರೆ, ಸಾಕ್ಷಿ ಹಾಜರುಪಡಿಸಲು ಕಾನೂನಿನಲ್ಲಿ ಅವಕಾಶವಿದೆ” ಎಂದು ನ್ಯಾಯಾಲಯ ಹೇಳಿ, ಅರ್ಜಿ ವಿಚಾರಣೆಗೆ ಪರಿಗಣಿಸಲು ನಿರಾಕರಿಸಿತು. “ಈ ಹಂತದಲ್ಲಿ ಅರ್ಜಿ ವಿಚಾರಣೆ ನಡೆಸಲು ಯಾವುದೇ ಸಕಾರಣವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಕಳೆದ ವರ್ಷವೂ ರಾಜೇಗೌಡ ಇಂಥದ್ದೇ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್ ನಿರ್ಧರಿಸಲಿದೆ ಎಂದು ಹೇಳಿತ್ತು.