
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಅಕ್ರಮಗಳನ್ನು ನಡೆಸಿ ಹೊಳೆನರಸೀಪುರದಿಂದ ಗೆದ್ದಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ 2025ರ ಜನವರಿ 20ಕ್ಕೆ ಮುಂದೂಡಿದೆ.
ಬಿಜೆಪಿ ಪರಾಜಿತ ಅಭ್ಯರ್ಥಿ ಹಾಗೂ ವಕೀಲ ಜಿ ದೇವರಾಜೇಗೌಡ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು ಅರ್ಜಿಯಲ್ಲಿನ ನಾಲ್ಕನೇ ಪ್ರತಿವಾದಿ ಬಿ ಕೆ ನಾಗರಾಜ್ ಪರ ವಕೀಲರು ಹಾಕಿರುವ ವಕಾಲತ್ತಿಗೆ ಕೆಲವೊಂದು ಕಚೇರಿ ಆಕ್ಷೇಪಣೆಗಳಿದ್ದು, ಅದನ್ನು ಸರಿಪಡಿಸುವಂತೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನ್ಯಾಯಾಲಯ ಹೇಳಿತ್ತು. ಆದರೆ, ಈವರೆಗೆ ಅದನ್ನು ಸರಿಪಡಿಸಲಾಗಿಲ್ಲ. ನ್ಯಾಯದ ಹಿತದೃಷ್ಟಿಯಿಂದ ಆಕ್ಷೇಪಣೆಗಳನ್ನು ಸರಿಪಡಿಸಲು ನಾಲ್ಕನೇ ಪ್ರತಿವಾದಿ ಪರ ವಕೀಲರಿಗೆ ಕೊನೆಯ ಅವಕಾಶ ನೀಡಲಾಗುತ್ತಿದ್ದು, ಮುಂದಿನ ವಿಚಾರಣೆ ವೇಳೆಗೆ ಆದನ್ನು ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದ ಪೀಠ ವಿಚಾರಣೆ ಮುಂದೂಡಿತು.
ಎಚ್ ಡಿ ರೇವಣ್ಣ ವ್ಯಾಪಕ ಚುನಾವಣಾ ಅಕ್ರಮ ಎಸಗಿದ್ದಾರೆ. ಆ ರೀತಿ ಅಕ್ರಮ ಎಸಗಿ ಗಳಸಿದ ಮತಗಳನ್ನು ಸಿಂಧು ಎಂದು ಪರಿಗಣಿಸಲು ಪ್ರಜಾಪ್ರತಿನಿಧಿ ಕಾಯಿದೆ-1951, ನೀತಿ ಸಂಹಿತೆ ಮತ್ತು ನಿಯಮ 1961 ಹಾಗೂ 2006ರ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ. ಹಾಗಾಗಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಅರ್ಜಿದಾರರನ್ನು ಆಯ್ಕೆಯಾಗಿದ್ದಾರೆ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.