ವಕೀಲರ ಪರಿಷತ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಕೀಲರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ [ರಾಮ್ ಕುಮಾರ್ ಗೌತಮ್ ಮತ್ತಿತರರು ಹಾಗೂ ಭಾರತ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ರಾಜ್ಯ ವಕೀಲರ ಪರಿಷತ್ತುಗಳಿಗೆ ಈಗಾಗಲೇ ಚುನಾವಣೆ ಘೋಷಣೆಯಾಗಿರುವುದನ್ನು ಗಣನೆಗೆ ತೆಗೆದುಕೊಂಡ ಸಿಜೆಐ ಸೂರ್ಯ ಕಾಂತ್ ನ್ಯಾಯಮೂರ್ತಿಗಳಾದ ಆರ್ ಮಹಾದೇವನ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಪ್ರಸಕ್ತ ಚುನಾವಣೆಗೆ ಸಂಬಂಧಿಸಿದಂತೆ ಅಂತಹ ಮೀಸಲಾಗಿ ಕೋರುವುದು ತುಂಬಾ ತಡವಾಯಿತು ಎಂದಿತು.
ವಕೀಲರ ಕಾಯಿದೆ 1961ರಲ್ಲಿ ಈ ಸಂಬಂಧ ಸ್ಪಷ್ಟ ಸೆಕ್ಷನ್‌ಗಳು ಇಲ್ಲದೆ ಹೋದರೂ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯ ನಂತರ ಮಹಿಳಾ ವಕೀಲರಿಗೆ ರಾಜ್ಯ ವಕೀಲರ ಪರಿಷತ್‌ಗಳಲ್ಲಿ ಮೀಸಲಾತಿ ನೀಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಆಗ ಸಿಜೆಐ ಅವರು, “ನ್ಯಾಯಾಂಗ, ವಕೀಲರು, ಸಂಸತ್ ಹೀಗೆ ನೀವು ಎಲ್ಲೆಲ್ಲೂ ಇದ್ದೀರಿ. ಪರಿಷತ್ತು 1961ರಿಂದಲೇ ಇದೆ. ಆದರೆ ನೀವು ಏನನ್ನೂ ಮಾಡಿಲ್ಲ. ಈಗ ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಿದೆ ಎಂಬ ಕಾರಣಕ್ಕೆ ನಮಗೂ ಬೇಕು ಎಂದು ಬಂದಿದ್ದೀರಿ.. ” ಎಂದು ಕಿಡಿಕಾರಿದರು.
ಇದೇ ವೇಳೆ ನ್ಯಾಯಾಲಯವು ತನ್ನ ಹಿಂದಿನ ಆದೇಶದ ಅರ್ಥವನ್ನು ಸ್ಪಷ್ಟಪಡಿಸುತ್ತಾ, ಮಹಿಳಾ ವಕೀಲರಿಗೆ ಯಾವುದೇ ಮೀಸಲಾತಿಯನ್ನು ನಾವು ನೀಡಿಲ್ಲ, ಬದಲಿಗೆ ಅವರಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂದಿತು.
ಮಹಿಳೆಯರಿಗೆ ಮೀಸಲಾತಿ ನೀಡಿಲ್ಲ, ಕೇವಲ ಶೇ 30ರಷ್ಟು ಪ್ರಾತಿನಿಧಿತ್ವವನ್ನು ಮಾತ್ರ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿತು. ಈ ಪ್ರಾತಿನಿಧಿತ್ವವು ದೀರ್ಘಕಾಲದ ನ್ಯಾಯಾಂಗ ಹೋರಾಟದ ಫಲವಾಗಿದ್ದು, ಚುನಾವಣೆಯ ಸಮಯದಲ್ಲಿ ತಕ್ಷಣ ಪರಿಹಾರ ಕೇಳುವುದು ಸರಿಯಲ್ಲ ಎಂದು ಸಿಜೆಐ ಅಭಿಪ್ರಾಯಪಟ್ಟರು.
ಅರ್ಜಿದಾರರು ಮೊದಲು ಸಂಬಂಧಿತ ಕಾನೂನುಬದ್ಧ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಸಲಹೆ ನೀಡಿತು. ಅವರ ಮನವಿಗೆ ಸ್ಪಂದನೆ ಸಿಗದಿದ್ದರೆ, ಮುಂದಿನ ಚುನಾವಣೆಗೆ ಸಂಬಂಧಿಸಿ ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ತಿಳಿಸಿ ಅರ್ಜಿಯನ್ನು ಮುಕ್ತಾಯಗೊಳಿಸಿತು.
ಸಂಬಂಧಪಟ್ಟವರು ಪ್ರಕರಣವನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದ ನ್ಯಾಯಾಲಯ ಮಹಿಳಾ ವಕೀಲರು ಹಾಗೂ ವಿಶೇಷ ಸಾಮರ್ಥ್ಯ ಹೊಂದಿದ ವಕೀಲರ ಹೆಚ್ಚಿನ ಪ್ರಾತಿನಿಧಿತ್ವ ಮತ್ತು ಭಾಗವಹಿಸುವಿಕೆಗೆ ಸಂಬಂಧಿಸಿದ ಕ್ರಮಗಳನ್ನು ಬೆಂಬಲಿಸಿತು.