Hemant Soren and Supreme CourtTwitter  Twitter
ಸುದ್ದಿಗಳು

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧದ ವಿಚಾರಣೆ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

Bar & Bench

ಅಕ್ರಮ ಹಣ ವರ್ಗಾವಣೆ, ಹಣ ದುರುಪಯೋಗ ಹಾಗೂ ಗಣಿ ಗುತ್ತಿಗೆ ಅಕ್ರಮಗಳ ಕುರಿತಂತೆ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಸೊರೇನ್‌ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಜಾರ್ಖಂಡ್‌ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠದಲ್ಲಿ ನಡೆಯಿತು.

“ನಾವಿದನ್ನು ಮುಕ್ತವಾಗಿಡುತ್ತಿದ್ದೇವೆ. ಹೈಕೋರ್ಟ್‌ ಮೊರೆ ಹೋಗಿ ವಿಚಾರಣೆಯ ಸಂದರ್ಭದಲ್ಲಿ ಅದನ್ನು ಪ್ರಸ್ತಾಪಿಸಿ” ಎಂದು ನ್ಯಾ. ಮಹೇಶ್ವರಿ ತಿಳಿಸಿದರು. ಬೇಸಿಗೆ ರಜೆ ಅವಧಿ ಮುಗಿದು ಸುಪ್ರೀಂ ಕೋರ್ಟ್‌ ಕಾರ್ಯಾರಂಭ ಮಾಡಿದ ನಂತರ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿ ನ್ಯಾಯಾಲಯ ಪ್ರಕರಣವನ್ನು ಮುಂದೂಡಿತು.

ಜಾರಿ ನಿರ್ದೇಶನಾಲಯ (ಇ ಡಿ) ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಈ ಹಿಂದೆ ಜಾರ್ಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಸೊರೇನ್‌ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿತ್ತು.

ಪಿಐಎಲ್‌ಗಳನ್ನು ವಿಚಾರಣೆಗೆ ಪರಿಗಣಿಸಬಹುದೇ ಎಂದು ನಿರ್ಧರಿಸುವಂತೆ ಸುಪ್ರೀಂ ಕೋರ್ಟ್‌ ಮೇ 24ರಂದು ಹೈಕೋರ್ಟ್‌ಗೆ ಸೂಚಿಸಿತ್ತು. ಅರ್ಜಿಗಳು ವಿಚಾರಣಾರ್ಹವಾಗಿವೆ ಎಂದು ಜೂನ್ 3ರಂದು ಹೈಕೋರ್ಟ್‌ ತಿಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಸರ್ಕಾರದ ಪರವಾಗಿ ಶುಕ್ರವಾರ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟಗಿ ವಾದ ಮಂಡಿಸಿದರು.