ಅಕ್ರಮ ಹಣ ವರ್ಗಾವಣೆ, ಹಣ ದುರುಪಯೋಗ ಮತ್ತು ಗಣಿಗಾರಿಕೆಗೆ ಪರವಾನಗಿ ನೀಡಿರುವ ಗಂಭೀರ ಆರೋಪದ ಮೇಲೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ವಿಚಾರಣಾ ಯೋಗ್ಯ ಎಂದು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಹೇಳಿದೆ (ಶಿವಶಂಕರ್ ಶರ್ಮಾ ಮತ್ತು ಜಾರ್ಖಂಡ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ).
ಸಿಎಂ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದನ್ನು ಗಮನಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ರಂಜನ್ ಮತ್ತು ನ್ಯಾಯಮೂರ್ತಿ ಸುಜಿತ್ ನಾರಾಯಣ ಪ್ರಸಾದ್ ಅವರಿದ್ದ ಪೀಠ ತಾಂತ್ರಿಕ ಕಾರಣಗಳಿಗಾಗಿ ರಿಟ್ ಅರ್ಜಿಗಳನ್ನು ತಿರಸ್ಕರಿಸಬೇಕು ಎಂಬ ಮನವಿಯನ್ನು ನಿರಾಕರಿಸಿತು. ಆ ಮೂಲಕ ಅರ್ಜಿಗಳು ನಿರ್ವಹಣಾ ಯೋಗ್ಯ ಎಂದಿತು.
"ಲಭ್ಯವಿರುವ ದಾಖಲೆಗಳಲ್ಲಿನ ಮನವಿಗಳ ಪ್ರಕಾರ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ. ಅಂದರೆ ವಿವಿಧ ಮೂಲಗಳಿಂದ ಸಮಾಜಕ್ಕೆ ಹಾಗೂ ಜನರ ಹಿತಾಸಕ್ತಿಗೆ ಧಕ್ಕೆ ಎಸಗಿ ಸಂಪಾದಿಸಲಾದ ಹಣವನ್ನು ಅಕ್ರಮ ವರ್ಗಾವಣೆ ಮೂಲಕ ಹೂಡಿಕೆ ಮಾಡಲು ಪ್ರಕರಣದಲ್ಲಿ ಅನುಮತಿಸಲಾಗಿದೆ" ಎಂದು ಪೀಠವು ಆರೋಪಗಳ ಗಂಭೀರತೆಯ ಬಗ್ಗೆ ಅಭಿಪ್ರಾಯಪಟ್ಟಿತು.
ಅರ್ಜಿ ಸಲ್ಲಿಸಿರುವುದರ ಹಿಂದೆ ಯಾವುದೇ ವೈಯಕ್ತಿಕ ಹಿತಾಸಕ್ತಿಗಳು ಕಂಡುಬಂದಿಲ್ಲ ಎಂಬುದನ್ನು ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿತು. ಜೂನ್ 10ಕ್ಕೆ ಅರ್ಜಿಗಳ ವಿಚಾರಣೆ ನಡೆಯಲಿದೆ.