Amnesty International and ED
Amnesty International and ED 
ಸುದ್ದಿಗಳು

ಜಾರಿ ನಿರ್ದೇಶನಾಲಯದಿಂದ ಬ್ಯಾಂಕ್‌ ಖಾತೆ ಜಫ್ತಿ: ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಅರ್ಜಿ ತಿರಸ್ಕರಿಸಿದ ಸುಪ್ರೀಂ

Bar & Bench

ಜಾರಿ ನಿರ್ದೇಶನಾಲಯವು ತನ್ನ ಬ್ಯಾಂಕ್‌ ಖಾತೆಗಳನ್ನು ಜಫ್ತಿ ಮಾಡಿರುವ ತಾತ್ಕಾಲಿಕ ಆದೇಶ ಪ್ರಶ್ನಿಸಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

₹1.54 ಕೋಟಿ ಮೊತ್ತದ ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟ್ರಸ್ಟ್‌ನ ಮೂರು ಬ್ಯಾಂಕ್‌ ಖಾತೆಗಳನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಜಪ್ತಿ ಮಾಡಿ ಪ್ರಾಧಿಕಾರವು ಹೊರಡಿಸಿರುವ ತಾತ್ಕಾಲಿಕ ಆದೇಶದಲ್ಲಿ ಮಧ್ಯಪ್ರವೇಶಿಸಲು ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಮತ್ತು ನ್ಯಾಯಮೂರ್ತಿ ಬೆಲಾ ಎಂ ತ್ರಿವೇದಿ ಅವರ ನೇತೃತ್ವದ ಪೀಠವು ನಿರಾಕರಿಸಿದೆ.

2022ರ ಮೇ 13ರಂದು ಮಾಡಿರುವ ಆದೇಶವನ್ನು ನ್ಯಾಯ ನಿರ್ಣಯ ಪ್ರಾಧಿಕಾರದ ಮುಂದೆ ಟ್ರಸ್ಟ್‌ ಪ್ರಶ್ನಿಸಬಹುದಾಗಿದೆ. “ಈ ಮನವಿಯನ್ನು ಪುರಸ್ಕರಿಸಲು ಯಾವುದೇ ಸಕಾರಣವಿಲ್ಲದಿರುವುದರಿಂದ ಅದನ್ನು ವಜಾ ಮಾಡಲಾಗಿದೆ. ಅದಾಗ್ಯೂ, ಈ ಆದೇಶ ಪ್ರಶ್ನಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಇರಲಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಜಾರಿ ನಿರ್ದೇಶನಾಲಯದ ಜಪ್ತಿ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಅಮ್ನೆಸ್ಟಿ ಟ್ರಸ್ಟ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಸರ್ಕಾರದ ಗಂಭೀರ ಕತ್ಯವ್ಯಲೋಪ ಹಾಗೂ ದಮನಕಾರಿ ನಡೆಗಳ ವಿರುದ್ಧ ಅಮ್ನೆಸ್ಟಿ ಇಂಟರ್ನ್ಯಾಷನಲ್‌ ದನಿ ಎತ್ತಿದ ಕಾರಣಕ್ಕೆ ಹಣ ಸಂಗ್ರಹಿಸಲು ತಾನು ಅನುಸರಿಸಿದ್ದ "ಕಾನೂನು ರೀತ್ಯಾತ್ಮಕ ಮಾದರಿ"ಯನ್ನು ಅಕ್ರಮ ಹಣ ವರ್ಗಾವಣೆ ಎಂದು ಬಿಂಬಿಸಲಾಗಿದೆ ಎಂದು ಅಮ್ನೆಸ್ಟಿ ಆರೋಪಿಸಿತ್ತು. ಕೇಂದ್ರ ಸರ್ಕಾರವು ಇದನ್ನು ಅಲ್ಲಗಳೆದಿತ್ತು.