Congress and Supreme Court 
ಸುದ್ದಿಗಳು

ರಾಜಕೀಯ ಪಕ್ಷದ ಚಿಹ್ನೆಯಾಗಿ ದೇಹದ ಅಂಗಗಳ ಬಳಕೆ ಪ್ರಶ್ನಿಸಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಸ್ತ ಚಿಹ್ನೆಯನ್ನು ಗುರಿಯಾಗಿಸುವುದು ಮನವಿಯ ಹಿಂದಿನ ಉದ್ದೇಶವಾಗಿ ತೋರುತ್ತದೆ ಎಂದು ನ್ಯಾಯಾಲಯ ಟೀಕಿಸಿತು.

Bar & Bench

ದೇಹದ ಅಂಗಗಳನ್ನು ರಾಜಕೀಯ ಪಕ್ಷದ ಚಿಹ್ನೆಯಾಗಿ ಬಳಸುವುದನ್ನು ತಡೆಯಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಸರ್ಗುಜಾ ಸೊಸೈಟಿ ಫಾರ್ ಫಾಸ್ಟ್ ಜಸ್ಟಿಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಸ್ತ ಚಿಹ್ನೆಯನ್ನು ಗುರಿಯಾಗಿಸುವುದು ಮನವಿಯ ಹಿಂದಿನ ಉದ್ದೇಶವಿರುವಂತೆ ತೋರುತ್ತಿದೆ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಪೀಠ  ನುಡಿಯಿತು.  

"ಇದು ಯಾವ ರೀತಿಯ ಮನವಿ? ಕಣ್ಣೂ ಇಲ್ಲ, ದೇಹವೂ ಇಲ್ಲ, ಇದನ್ನು ವಜಾಗೊಳಿಸಲಾಗಿದೆ. ಕೈ ಚಿಹ್ನೆಗೆ ತಡೆಯೊಡ್ಡುವುದಷ್ಟೇ ಇದರ ಉದ್ದೇಶವಾಗಿದೆ," ಎಂದು ನ್ಯಾಯಾಲಯ ಹೇಳಿತು.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಮಾನವ ದೇಹದ ಭಾಗಗಳನ್ನು ಹೋಲುವ ಚಿಹ್ನೆಗಳ ಬಳಕೆ ವಿರುದ್ಧ ಅರ್ಜಿದಾರರು ಹಲವು ಬಾರಿ ದೂರು ನೀಡಿದ್ದರೂ ಭಾರತೀಯ ಚುನಾವಣಾ ಆಯೋಗ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಮಾನವ ದೇಹದ ಭಾಗಗಳನ್ನು ಚಿಹ್ನೆಗಳಾಗಿ ಇಸಿಐ ಹಂಚಬಹುದೇ, ಅಂತಹ ಹಂಚಿಕೆ ಸಂವಿಧಾನದ ಸಂವಿಧಾನದ 324 ನೇ ವಿಧಿ, ಜನತಾ ಪ್ರಾತಿನಿಧ್ಯ ಕಾಯಿದೆ, ಸಾಮಾನ್ಯ ಷರತ್ತುಗಳ ಕಾಯಿದೆ ಮತ್ತು ನಡವಳಿಕೆಯನ್ನು ಉಲ್ಲಂಘಿಸುತ್ತದೆಯೇ ಎನ್ನುವ ವಿಚಾರಗಳನ್ನು ನಿರ್ಧರಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.