Supreme Court and Andhra CM Jagan Mohan Reddy 
ಸುದ್ದಿಗಳು

ಜಗನ್‌ ವಿರುದ್ಧ ಕ್ರಮಕ್ಕೆ ಆಗ್ರಹ: ಒಂದು ಪ್ರಕರಣ ಉಳಿಸಿಕೊಂಡು ಉಳಿದವುಗಳನ್ನು ವಜಾ ಮಾಡಿದ ಸುಪ್ರೀಂಕೋರ್ಟ್‌

ಜಗನ್‌ ಅವರ ನಡವಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮತ್ತು ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ತೆಗೆದುಹಾಕಲು ತನಿಖೆಗೆ ಮುಂದಾಗುವಂತೆ ಒತ್ತಾಯಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಪೀಠ.

Bar & Bench

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ವಿರುದ್ಧ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಆದರೆ ಸುಪ್ರೀಂಕೋರ್ಟ್‌ ಅಥವಾ ಅದರ ನ್ಯಾಯಮೂರ್ತಿಗಳ ಬಗ್ಗೆ ರೆಡ್ಡಿ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಸುನಿಲ್‌ ಕುಮಾರ್‌ ಸಿಂಗ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗಾಗಿ ಉಳಿಸಿಕೊಳ್ಳಲಾಗಿದೆ.

ಜಗನ್‌ ಅವರು ನೀಡಿರುವ ಹೇಳಿಕೆಗಳು ಸಂವಿಧಾನದ 121ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂದು ಸಿಂಗ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ತನೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಯಾವುದೇ ಚರ್ಚೆಯನ್ನು ವಿಧಿ ನಿಷೇಧಿಸುತ್ತದೆ.

ಸುನಿಲ್ ಕುಮಾರ್ ಸಿಂಗ್ ಪರ ವಾದ ಮಂಡಿಸಿದ ವಕೀಲೆ ಮುಕ್ತಿ ಸಿಂಗ್, "ಇಎಂಎಸ್ ನಂಬೂದರಿಪಾಡ್‌ ಪ್ರಕರಣದಲ್ಲಿ, ಮುಖ್ಯಮಂತ್ರಿಗಳು ಅಂತಹ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಅವರಿಗೆ ತಮ್ಮದೇ ಆದ ಬೆಂಬಲವಿರುತ್ತದೆ" ಎಂದರು. ಆದರೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ ರಾಯ್ ಅವರಿದ್ದ ನ್ಯಾಯಪೀಠ, “ಬಾಕಿ ಇರುವ ಅರ್ಜಿಯೊಂದಿಗೆ ವಿಷಯವನ್ನು ಸೇರಿಸೋಣ… “ ಎಂದಿತು.

ಜಗನ್‌ ಅವರ ನಡವಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮತ್ತು ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ತೆಗೆದುಹಾಕಲು ತನಿಖೆಗೆ ಮುಂದಾಗುವಂತೆ ಒತ್ತಾಯಿಸಿದ್ದ ಅರ್ಜಿಗಳನ್ನು ಪೀಠ ವಜಾಗೊಳಿಸಿತು. “ದಿನಪತ್ರಿಕೆಗಳಿಂದ ಏನೋ ಒಂದನ್ನು ನೀವು ಎತ್ತಿಕೊಳ್ಳುತ್ತೀರಿ, ನಿಮಗಿಷ್ಟ ಬಂದಂತೆ ಅರ್ಜಿ ದಾಖಲಿಸುತ್ತೀರಿ. ನೂರು ಮಂದಿ ಸಹಾಯ ಮಾಡಲು ಮುಂದೆ ಬಂದರೆ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಎಂದು ನೂರು ಮಂದಿಗೂ ನಾವು ಹೇಗೆ ಅನುಮತಿ ನೀಡಲು ಸಾಧ್ಯ? ಇದು ಅಂತ್ಯವಿಲ್ಲದ ಕಸರತ್ತಾಗುತ್ತದೆ” ಎಂದು ಪೀಠ ಆಕ್ಷೇಪಿಸಿತು.

ನ್ಯಾ ಎನ್‌ ವಿ ರಮಣ ಅವರ ವಿರುದ್ಧ‌ ಜಗನ್‌ ನೀಡಿದ ಹೇಳಿಕೆಗಳನ್ನು ಪ್ರಶ್ನಿಸಿ ಮೂರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ರೆಡ್ಡಿ ಅವರ ವಿರುದ್ಧವೇ 20 ಕ್ರಿಮಿನಲ್‌ ಮೊಕದ್ದಮೆಗಳಿವೆ ಎಂದು ಕೂಡ ಅರ್ಜಿಗಳಲ್ಲಿ ಆರೋಪಿಸಲಾಗಿತ್ತು.