Supreme Court
Supreme Court 
ಸುದ್ದಿಗಳು

ಲಿವ್-ಇನ್ ಸಂಬಂಧ ನೋಂದಣಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್: ಅಸಂಬದ್ಧ ಅರ್ಜಿ ಎಂದ ನ್ಯಾಯಾಲಯ

Bar & Bench

ಲಿವ್‌-ಇನ್‌ (ಸಹಜೀವನ) ಸಂಬಂಧ ನಡೆಸುತ್ತಿರುವವರ ನೋಂದಣಿಗಾಗಿ ಮತ್ತು ಅಂತಹವರಿಗೆ ಸಾಮಾಜಿಕ ಭದ್ರತೆ ನೀಡುವುದಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ [ಮಮತಾ ರಾಣಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇದು ತಪ್ಪು ಗ್ರಹಿಕೆಯ ಅರ್ಜಿಯಾಗಿದೆ ಎಂದಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪಾರ್ದಿವಾಲಾ ಅವರಿದ್ದ ಪೀಠ ಅರ್ಜಿದಾರರ ಉದ್ದೇಶವನ್ನು ಕೂಡ ಪ್ರಶ್ನಿಸಿತು.

ʼನೀವು ಲಿವ್‌-ಇನ್‌ ಸಂಬಂಧದಲ್ಲಿರುವವರ ಸುರಕ್ಷತೆ ಬಯಸಲು ಹೊರಟಿರುವಿರೋ ಅಥವಾ ಅವರು ಸಹಜೀವನ ನಡೆಸಲು ಬಿಡಬಾರದು ಎಂದು ಹೇಳುತ್ತಿರುವಿರೋ? ಈ ಅರ್ಜಿಗೆ ದಂಡ ವಿಧಿಸಬೇಕು. ಇದು ಕೇವಲ ಅಸಂಬದ್ಧ ಅರ್ಜಿ” ಎಂದು ಅರ್ಜಿಯನ್ನು ವಜಾಗೊಳಿಸುವ ಮುನ್ನ ಸಿಜೆಐ ಅಸಮಾಧಾನ ವ್ಯಕ್ತಪಡಿಸಿದರು.

ಸಹಜೀವನ ನಡೆಸುತ್ತಿರುವವರಿಗೆ ಸಾಮಾಜಿಕ ಸಮಾನತೆ ಮತ್ತು ಭದ್ರತೆ ಒದಗಿಸಬೇಕು. ಲಿವ್‌-ಇನ್‌ ಸಂಬಂಧ ನೋಂದಾಯಿಸದಿದ್ದರೆ ಮುಕ್ತವಾಗಿ ಜೀವಿಸುವ ಹಕ್ಕು (ಸಂವಿಧಾನದ 19ನೇ ವಿಧಿ), ಜೀವ ರಕ್ಷಣೆಯ ಹಕ್ಕು (21ನೇ ವಿಧಿ) ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಜೊತೆಗೆ, ಇಂತಹ ಸಂಬಂಧಗಳನ್ನು ನಿಯಂತ್ರಿಸಲು ಕಾನೂನು ರೂಪಿಸಬೇಕು ಹಾಗೂ ದೇಶದಲ್ಲಿ ಲಿವ್‌-ಇನ್ ಸಂಬಂಧದಲ್ಲಿರುವವರ ನಿಖರ ಸಂಖ್ಯೆ ಪತ್ತೆ ಮಾಡಲು ಕೇಂದ್ರ ಸರ್ಕಾರ ದತ್ತಕೋಶ ರಚಿಸುವ ತುರ್ತು ಅಗತ್ಯವಿದೆ. ಲಿವ್‌-ಇನ್‌ ಸಂಬಂಧಗಳ ನೋಂದಣಿ ಕಡ್ಡಾಯ ಮಾಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ನಿಯಮಗಳು ಮತ್ತು ಮಾರ್ಗಸೂಚಿಗಳು ಇಲ್ಲದೇ ಇರುವುದರಿಂದ ಲಿವ್‌-ಇನ್‌ ಸಂಬಂಧದಲ್ಲಿರುವವರ ನಡುವೆ ಅತ್ಯಾಚಾರ ಕೊಲೆಯಂತಹ ಪ್ರಮುಖ ಅಪರಾಧಗಳು ಹೆಚ್ಚಿವೆ ಎಂದು ಉಲ್ಲೇಖಿಸಲಾಗಿತ್ತು.