ಲೈಂಗಿಕ ಸಂಬಂಧ ಸಮ್ಮತದಿಂದ ಕೂಡಿತ್ತು ಎಂಬುದನ್ನು ತೋರಿಸಲು ಲಿವ್ ಇನ್ ಸಂಬಂಧವೇ ಸಾಕು ಎಂದು ಈಚೆಗೆ ಹೇಳಿರುವ ಮುಂಬೈ ನ್ಯಾಯಾಲಯವು ಲಿವ್ ಇನ್ ಸಂಬಂಧದಲ್ಲಿದ್ದ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ 30 ವರ್ಷದ ಆರೋಪಿ ಯುವಕನಿಗೆ ಜಾಮೀನು ಮಂಜೂರು ಮಾಡಿದೆ.
ದೂರುದಾರೆಯಾದ ಲಿವ್ ಇನ್ ಸಂಗಾತಿಯು ಜಾಮೀನಿಗೆ ತಮ್ಮದು ಯಾವುದೇ ಆಕ್ಷೇಪವಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಆರೋಪಿ/ಅರ್ಜಿದಾರ ದಿಂಡೋಶಿಯ ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದರು.
ದೂರುದಾರೆ ಜಾಮೀನಿಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳುವುದಕ್ಕೂ ಮಿಗಿಲಾಗಿ ಎಫ್‌ಐಆರ್‌ನಿಂದ ತಿಳಿದುಬರುವುದೇನೆಂದರೆ ಸಂಬಂಧವು ಒಪ್ಪಿತವಾಗಿದ್ದು, ಆರೋಪಿ ಮತ್ತು ದೂರುದಾರೆಯು ವಿವಾಹೇತರವಾಗಿ ಸಹ ಜೀವನ ನಡೆಸಿದ್ದರು ಎಂಬುದಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಎಸ್ ಯು ಬಘೇಲ್ ಹೇಳಿದ್ದಾರೆ.
“ಲೈಂಗಿಕ ಸಂಬಂಧವು ಒಮ್ಮತದಿಂದ ಕೂಡಿತ್ತು ಎಂಬುದಕ್ಕೆ ಲಿವ್ ಇನ್ ಸಂಬಂಧವೇ ಸಾಕು. ಹೀಗಾಗಿ, ಅರ್ಜಿದಾರರು ಜಾಮೀನು ಪಡೆಯಲು ಅರ್ಹರಾಗಿದ್ದು, ಜಾಮೀನಿಗೆ ಆಕ್ಷೇಪಣೆ ಇಲ್ಲ ಎಂದು ಸ್ವಯಂಪ್ರೇರಿತವಾಗಿ ಅಥವಾ ಬೇರಾವುದೇ ಕಾರಣಕ್ಕಾಗಿ ನೀಡಿದ್ದಾರೆ ಎಂಬುದು ಮುಖ್ಯವಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.
ಆರೋಪಿಯು ದೂರುದಾರೆಯನ್ನು ವಿವಾಹವಾಗುವುದಾಗಿ ನಂಬಿಸಿದ್ದರಿಂದ ಇಬ್ಬರೂ 2018ರ ನವೆಂಬರ್‌ನಿಂದ 2020ರ ಮೇವರೆಗೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪ್ಲ್ಯಾಟ್ ಬಾಡಿಗೆ ಪಡೆದು ಜೀವನ ನಡೆಸಿದ್ದರು. ಆನಂತರ, ಆರೋಪಿಯು ಮಹಿಳೆಯನ್ನು ವಿವಾಹವಾಗುವುದಿಲ್ಲ ಎಂದು ಹೇಳಿ ಮತ್ತೊಬ್ಬ ಮಹಿಳೆಯ ಜೊತೆ ಮದುವೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಸಂತ್ರಸ್ತೆಯು ದೂರು ನೀಡಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 376 (ಅತ್ಯಾಚಾರ), 313 (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣವಾಗುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.
ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸಂತ್ರಸ್ತೆಯು ಆರೋಪಿಗೆ ಜಾಮೀನು ನೀಡಲು ಆಕ್ಷೇಪಣೆ ಇಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದು, ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ್ದಾರೆ. ಲಿವ್ ಇನ್ ಸಂಬಂಧ ಹೊಂದಿದ್ದಾಗ ಎರಡು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಗಿ ದೂರುದಾರೆ ಹೇಳಿದ್ದು, ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾಗಿ ಹೇಳಿದ್ದಾರೆ.
ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164ರ ಅಡಿ ದೂರುದಾರೆಯ ಹೇಳಿಕೆಯನ್ನು ಇನ್ನೂ ದಾಖಲಿಸಿಕೊಳ್ಳಲಾಗಿಲ್ಲ ಎಂದಿರುವ ಪ್ರಾಸಿಕ್ಯೂಷನ್ ಜಾಮೀನಿಗೆ ವಿರೋಧ ದಾಖಲಿಸಿತ್ತು. ಈ ಹಂತದಲ್ಲಿ ಆರೋಪಿಯನ್ನು ಬಿಡುಗಡೆ ಮಾಡುವುದರಿಂದ ಪ್ರಕರಣದ ಮೇಲೆ ವ್ಯತಿರಕ್ತ ಪರಿಣಾಮ ಉಂಟಾಗಲಿದೆ ಎಂದು ವಾದಿಸಿತ್ತು. ಉಭಯ ವಾದಗಳನ್ನು ಆಲಿಸಿದ ಪೀಠವು ಆರೋಪಿಗೆ ರೂ. 15 ಸಾವಿರ ಬಾಂಡ್ ಸಲ್ಲಿಸುವಂತೆ ಹೇಳಿ, ಜಾಮೀನು ಮಂಜೂರು ಮಾಡಿದೆ.