Kerala assembly ruckus, D Y Chandrachud and MR Shah
Kerala assembly ruckus, D Y Chandrachud and MR Shah 
ಸುದ್ದಿಗಳು

ಕೇರಳ ವಿಧಾನಸಭೆಯಲ್ಲಿ ಎಡಪಕ್ಷದ ಶಾಸಕರಿಂದ ದಾಂಧಲೆ ಪ್ರಕರಣ: ದೂರು ಹಿಂಪಡೆಯುವ ಸರ್ಕಾರದ ಅರ್ಜಿ ವಜಾ ಮಾಡಿದ ಸುಪ್ರೀಂ

Bar & Bench

ಕೇರಳದಲ್ಲಿ ತಾನು ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ, 2015ರಲ್ಲಿ ವಿಧಾನಸಭೆಯಲ್ಲಿ ಉಂಟುಮಾಡಿದ ದಾಂಧಲೆಗೆ ಸಂಬಂಧಿಸಿದಂತೆ ತನ್ನ ಪಕ್ಷದ ಶಾಸಕರ ವಿರುದ್ಧ ದಾಖಲಾಗಿದ್ದ ಪ್ರಕರಣ ಹಿಂಪಡೆಯುವ ಸಂಬಂಧ ಭಾರತೀಯ ಕಮ್ಯುನಿಸ್ಟ್‌ ಪಕ್ಷ - ಮಾರ್ಕ್ಸ್‌ವಾದಿ (ಸಿಪಿಐ-ಎಂ) ಸಲ್ಲಿಸಿದ್ದ ಮನವಿಯನ್ನು ಬುಧವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಆರೋಪಿತ ಶಾಸಕರು ತಮಗೆ ದೊರೆತಿದ್ದ ಸಾಂವಿಧಾನಿಕ ಮಿತಿಯನ್ನು ಮೀರಿದ್ದರಿಂದ ಸದನದಲ್ಲಿ ಶಾಸಕರಿಗೆ ಸಂವಿಧಾನಾತ್ಮಕವಾಗಿ ದೊರೆತಿದ್ದ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ನಿಂದ ವಿನಾಯಿತಿ ನೀಡುವ ರಕ್ಷಣೆಯು ದೊರೆಯುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠವು ಸ್ಪಷ್ಟವಾಗಿ ಹೇಳಿದೆ.

“ವಿಧಾನಸಭೆಯಲ್ಲಿ ದಾಂಧಲೆ ಸೃಷ್ಟಿಸುವುದನ್ನು ಸದನದಲ್ಲಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಮನಾಗಿ ನೋಡಲಾಗದು. ಇಂಥ ಸಂದರ್ಭದಲ್ಲಿ ಪ್ರಕರಣ ಹಿಂಪಡೆಯಲು ಅನುಮತಿಸುವುದು ಕಾನೂನುಬಾಹಿರ ಕಾರಣಗಳಿಗೆ ನ್ಯಾಯದಾನದಲ್ಲಿ ಮಧ್ಯಪ್ರವೇಶಿಸಿದಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ತಮ್ಮ ಕರ್ತವ್ಯವನ್ನು ಯಾವುದೇ ಅಳುಕಿಲ್ಲದೇ ನಿಭಾಯಿಸಲಿ ಎಂಬ ಕಾರಣಕ್ಕೆ ಸಂಸದರು/ಶಾಸಕರಿಗೆ ವಿನಾಯಿತಿ ನೀಡಲಾಗಿದೆಯೇ ವಿನಾ ಸಾಮಾನ್ಯ ಜನರಿಗಿಂತ ಹೆಚ್ಚಿನ ಸಾಮಾಜಿಕ ಮಾನ್ಯತೆ ಪಡೆಯುವ ಸ್ಥಾನಮಾನದ ಗುರುತು ಅದಲ್ಲ ಎಂದು ನ್ಯಾಯಾಲಯ ಹೇಳಿದೆ.

“ಕ್ರಿಮಿನಲ್‌ ಕಾನೂನಿನಿಂದ ವಿನಾಯಿತಿ ಪಡೆಯಲು ವಿಶೇಷಾಧಿಕಾರವನ್ನು ಬಳಸಲಾಗದು. ಹಾಗೆ ಮಾಡುವುದು ಜನರಿಗೆ ವಂಚಿಸಿದಂತೆ. ಯಾವುದೇ ಅಳುಕು ಅಥವಾ ಆತಂಕವಿಲ್ಲದೇ ತಮ್ಮ ಕರ್ತವ್ಯ ನಿಭಾಯಿಸಲು ಸದಸ್ಯರಿಗೆ ಕ್ರಿಮಿನಲ್‌ ಕಾನೂನಿನಿಂದ ವಿನಾಯಿತಿ ನೀಡಲಾಗುತ್ತದೆ. ಹೀಗಾಗಿ, ಸದಸ್ಯರು ತಾವು ತೆಗೆದುಕೊಂಡ ಪ್ರಮಾಣ ವಚನಕ್ಕೆ ಬದ್ಧವಾಗಿ, ತಮಗೆ ದೊರೆತಿರುವ ವಿನಾಯಿತಿಯನ್ನು ಮುಕ್ತವಾಗಿ ಕರ್ತವ್ಯ ನಿಭಾಯಿಸಲು ಬಳಸಿಕೊಳ್ಳಬೇಕು. ವಿಶೇಷಾಧಿಕಾರ ಮತ್ತು ವಿನಾಯಿತಿಗಳು ಸಾಮಾನ್ಯರಿಗಿಂತ ಭಿನ್ನವಾಗಿ ನಿಲ್ಲಲು ಮತ್ತು ಘನತೆ ತೋರ್ಪಡಿಸಲು ಅಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಸಾಕ್ಷ್ಯದ ಸೀಕಾರಾರ್ಹತೆ ಮತ್ತಿತರ ವಿಚಾರಗಳನ್ನು ವಿಚಾರಣಾಧೀನ ನ್ಯಾಯಾಲಯ ನೋಡಿಕೊಳ್ಳಲಿದೆ ಎಂದಿರುವ ಕೇರಳ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಆದ್ದರಿಂದ “ಕೇರಳ ಸರ್ಕಾರದ ಮೇಲ್ಮನವಿಯಲ್ಲಿ ಯಾವುದೇ ಅರ್ಹತೆ ಇಲ್ಲ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಹಾಲಿ ಸಚಿವರು ಸೇರಿದಂತೆ ಆರೋಪಿತ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ತಿರುವನಂತಪುರದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿದ್ದ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಮಾರ್ಚ್‌ 12ರಂದು ಕೇರಳ ಹೈಕೋರ್ಟ್‌ ವಜಾ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಪೀಠವು ಇಂದು ಆದೇಶ ನೀಡಿದೆ.

ಮೈಕ್ರೋಫೋನ್‌ ಎಸೆಯುವುದು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಸರ್ಕಾರಿ ಸೇವಕರ ನಡೆಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ವಿಚಾರಣೆಯ ಸಂದರ್ಭದಲ್ಲಿ ಪೀಠ ಹೇಳಿದೆ. “ಇಂಥ ದುರ್ನಡತೆಗಳ ವಿರುದ್ಧ ನಾವು ಕಠಿಣ ಕ್ರಮಕೈಗೊಳ್ಳಬೇಕಿದೆ. ಇದನ್ನು ಒಪ್ಪಲಾಗದು. ಸದನದಲ್ಲಿ ಮೈಕ್‌ ಎಸೆಯುವ ಶಾಸಕರ ನಡತೆ ನೋಡಿ. ಅವರು ವಿಚಾರಣೆ ಎದುರಿಸಲೇಬೇಕು” ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಹೇಳಿದ್ದರು.

“ಇದು ಕಳವಿಗೆ ಸಂಬಂಧಿಸಿದ್ದಲ್ಲ. ಆದರೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದಾಗಿದೆ. ಈ ಆಸ್ತಿಯ ರಕ್ಷಕನಾಗಿ ಸರ್ಕಾರವಿದೆ. ನ್ಯಾಯಾಲಯದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಕೆಲವು ಸಂದರ್ಭದಲ್ಲಿ ವಕೀಲರು ತಾಳ್ಮೆ ಕಳೆದುಕೊಂಡು ಒಬ್ಬರನ್ನೊಬ್ಬರು ವಿರೋಧಿಸುತ್ತಾರೆ. ಹಾಗೆಂದು ನ್ಯಾಯಾಲಯದ ಆಸ್ತಿಗೆ ಹಾನಿ ಮಾಡುವುದನ್ನು ಸಮರ್ಥಿಸಲಾಗುತ್ತದೆಯೇ?” ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಪ್ರಶ್ನಿಸಿದ್ದರು.