CJI DY Chandrachud led 7-judge bench to hear SC ST sub-category case 
ಸುದ್ದಿಗಳು

ಎಸ್‌ಸಿ, ಎಸ್‌ಟಿ ಉಪ ವರ್ಗೀಕರಣ ತೀರ್ಪು ಪ್ರಶ್ನಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಅರ್ಜಿದಾರರು ಕೋರಿರುವುದರಲ್ಲಿ ಸಕಾರಣವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಇದಾಗಲೇ ಹೇಳಿತ್ತು.

Bar & Bench

ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅವುಗಳ ಆಂತರಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಒಳ ಮೀಸಲಾತಿ ನೀಡುವುದಕ್ಕೆ ರಾಜ್ಯಗಳಿಗೆ ಇರುವ ಅಧಿಕಾರವನ್ನು ಆಗಸ್ಟ್‌ 1ರಂದು ಎತ್ತಿ ಹಿಡಿದಿದ್ದ ತನ್ನ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.

ತೀರ್ಪು ಮರುಪರಿಶೀಲನೆ ಮಾಡಲು ಅರ್ಜಿದಾರರು ಸಕಾರಣ ನೀಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ವಿಕ್ರಮ್‌ ನಾಥ್‌, ಬೆಲಾ ಎಂ ತ್ರಿವೇದಿ, ಪಂಕಜ್‌ ಮಿತ್ತಲ್‌, ಮನೋಜ್‌ ಮಿಶ್ರಾ ಮತ್ತು ಸತೀಶ್‌ ಚಂದ್ರ ಶರ್ಮಾ ಅವರ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಹೇಳಿದೆ.

“ಮರುಪರಿಶೀಲನೆ ಅರ್ಜಿ ಸಲ್ಲಿಸಲು ಅನುಮತಿ ನೀಡಲಾಗಿತ್ತು. ಮುಕ್ತ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿಯನ್ನು ಪಟ್ಟಿ ಮಾಡಲು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಮರುಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಿದಾಗ ತೀರ್ಪಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಹೀಗಾಗಿ, ಮರುಪರಿಶೀಲನಾ ಅರ್ಜಿ ವಜಾ ಮಾಡಲಾಗಿದೆ” ಎಂದು ಸೆಪ್ಟೆಂಬರ್‌ 24ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ.

ಆಗಸ್ಟ್‌ 1ರಂದು ಸಿಜೆಐ ಚಂದ್ರಚೂಡ್‌ ಅವರ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಇ ವಿ ಚಿನ್ನಯ್ಯ ಮತ್ತು ಆಂಧ್ರ ಪ್ರದೇಶ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2005 ರಲ್ಲಿ ನೀಡಲಾಗಿದ್ದ ತೀರ್ಪನ್ನು ಬದಿಗೆ ಸರಿಸಿತ್ತು. ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವುದು ಸಂವಿಧಾನದ 341ನೇ ವಿಧಿಗೆ ವಿರುದ್ಧ. ಎಸ್‌ಸಿ/ಎಸ್‌ಟಿ ಸಮುದಾಯಗಳ ಪಟ್ಟಿ ಸಿದ್ಧಪಡಿಸುವ ಅಧಿಕಾರ ಇರುವುದು ರಾಷ್ಟ್ರಪತಿಗಳಿಗೆ ಮಾತ್ರ ಎಂದು ಚಿನ್ನಯ್ಯ ಪ್ರಕರಣದ ತೀರ್ಪಿನಲ್ಲಿ ತಿಳಿಸಲಾಗಿತ್ತು.