ಎಸ್‌ಸಿ, ಎಸ್‌ಟಿ ಉಪ ವರ್ಗೀಕರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: ಇ ವಿ ಚಿನ್ನಯ್ಯ ಪ್ರಕರಣದ ತೀರ್ಪು ರದ್ದು
ಮಹತ್ವದ ತೀರ್ಪೊಂದರಲ್ಲಿ ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅವುಗಳ ಆಂತರಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಒಳ ಮೀಸಲಾತಿ ನೀಡುವುದಕ್ಕೆ ರಾಜ್ಯಗಳಿಗೆ ಇರುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ [ಪಂಜಾಬ್ ಸರ್ಕಾರ ಇನ್ನಿತರರು ಮತ್ತು ದೇವಿಂದರ್ ಸಿಂಗ್ ಇನ್ನಿತರರ ನಡುವಣ ಪ್ರಕರಣ].
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಇ ವಿ ಚಿನ್ನಯ್ಯ ಮತ್ತು ಆಂಧ್ರ ಪ್ರದೇಶ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2005 ರಲ್ಲಿ ನೀಡಲಾಗಿದ್ದ ತೀರ್ಪನ್ನು ಬದಿಗೆ ಸರಿಸಿತು. ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವುದು ಸಂವಿಧಾನದ 341ನೇ ವಿಧಿಗೆ ವಿರುದ್ಧ. ಎಸ್‌ಸಿ/ಎಸ್‌ಟಿ ಸಮುದಾಯಗಳ ಪಟ್ಟಿ ಸಿದ್ಧಪಡಿಸುವ ಅಧಿಕಾರ ಇರುವುದು ರಾಷ್ಟ್ರಪತಿಗಳಿಗೆ ಮಾತ್ರ ಎಂದು ಚಿನ್ನಯ್ಯ ಪ್ರಕರಣದ ತೀರ್ಪಿನಲ್ಲಿ ತಿಳಿಸಲಾಗಿತ್ತು.
ಇದೇ ವೇಳೆ ಭಿನ್ನ ತೀರ್ಪು ನೀಡಿದ ನ್ಯಾಯಮೂರ್ತಿ ಬೇಲಾ ತ್ರಿವೇದಿ ಒಳ ಮೀಸಲಾತಿಗೆ ಅನುಮತಿ ನೀಡಬಾರದು ಎಂದರು.
ಆದರೆ ಬಹುಮತದ ತೀರ್ಪಿನಲ್ಲಿ "ಎಸ್‌ಸಿ/ಎಸ್‌ಟಿ ಸದಸ್ಯರು ಎದುರಿಸುತ್ತಿರುವ ವ್ಯವಸ್ಥಿತ ತಾರತಮ್ಯದಿಂದಾಗಿ ಅವರ ಪ್ರಗತಿ ಸಾಧ್ಯವಾಗದು. ಸಂವಿಧಾನದ 14ನೇ ವಿಧಿ ಒಳ ಮೀಸಲಾತಿಗೆ ಅನುಮತಿಸುತ್ತದೆ. ವರ್ಗವೊಂದು ಏಕರೂಪವಾಗಿದೆಯೇ ಅಥವಾ ನಿರ್ದಿಷ್ಟ ಉದ್ದೇಶಕ್ಕಾಗಿ ಸಂಯೋಜಿಸದ ವರ್ಗವನ್ನು ಮತ್ತಷ್ಟು ವರ್ಗೀಕರಿಸಬಹುದೇ ಎಂದು ನ್ಯಾಯಾಲಯ ಪರಿಶೀಲಿಸಬೇಕು” ಎಂದಿತು.
ಪಂಜಾಬ್, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಒಳ ಮೀಸಲಾತಿಗೆ ಅವಕಾಶ ಕಲ್ಪಿಸುವ ಕಾಯಿದೆಗಳ ಸಿಂಧುತ್ವವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಈ ನಿಟ್ಟಿನಲ್ಲಿ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯಿದೆ, 2006ನ್ನು ಅದು ಎತ್ತಿಹಿಡಿದಿದೆ.
ಮೀಸಲಾತಿ ವರ್ಗದ ಸಮುದಾಯಗಳ ಉಪ-ವರ್ಗೀಕರಣವನ್ನು ಒಳಗೊಂಡ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಸೇವಾ ಮೀಸಲಾತಿ) ಕಾಯಿದೆ, 2006ರ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈ ತೀರ್ಪು ನೀಡಲಾಗಿದೆ.
ಇದೇ ವೇಳೆ ಮೀಸಲಾತಿಯಲ್ಲಿ ಕೆನೆಪದರ ಗುರುತಿಸಲು ರಾಜ್ಯ ಸರ್ಕಾರಗಳು ನೀತಿ ರೂಪಿಸಬೇಕು ಎಂದು ನ್ಯಾಯಮೂರ್ತಿ ಗವಾಯಿ ಅವರು ತಿಳಿಸಿದರು.
ಸಮುದಾಯಗಳ ಉಪ ವರ್ಗೀಕರಣ ಮತ್ತು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಇರುವ ವ್ಯತ್ಯಾಸವನ್ನು ಪ್ರಸ್ತಾಪಿಸಿದ ಸಿಜೆಐ ಸಮುದಾಯಗಳ ಒಳಗೊಳ್ಳುವಿಕೆ ಇಲ್ಲವೇ ಹೊರಗಿಡುವಿಕೆಗೆ ಸಂಬಂಧಿಸಿದಂತೆ ರಾಜಕೀಯ ತುಷ್ಟೀಕರಣ ನಡೆಯಬಾರದು ಎಂದರು.