ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ [ಮ್ಯಾಥ್ಯೂಸ್ ಜೆ ನೆಡುಂಪರಾ ಇನ್ನಿತರರು ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತಿತರರ ನಡುವಣ ಪ್ರಕರಣ]
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಸಾಂವಿಧಾನಿಕ ಪೀಠ ವಕೀಲ ಮ್ಯಾಥ್ಯೂಸ್ ಜೆ ನೆಡುಂಪರಾ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.
"ಮುಕ್ತ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿಗಳನ್ನು ಪಟ್ಟಿ ಮಾಡುವ ಅರ್ಜಿಯನ್ನು ವಜಾಗೊಳಿಸಲಾಗಿದೆ. ವಿಳಂಬವನ್ನು ಮಾಫಿ ಮಾಡಲಾಗಿದೆ. ಮರುಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಿದಾಗ, ದಾಖಲೆಗೆ ಸಂಬಂಧಿಸಿದಂತೆ ಯಾವುದೇ ದೋಷ ಕಂಡುಬಂದಿಲ್ಲ. ಸುಪ್ರೀಂ ಕೋರ್ಟ್ ನಿಯಮಗಳು 2013 ರ ಆದೇಶ XLVII ನಿಯಮ 1 ರ ಅಡಿಯಲ್ಲಿ ಪರಿಶೀಲಿಸಬಹುದಾದಂತಹ ವಿಷಯವಿಲ್ಲ. ಹಾಗಾಗಿ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ,’’ ಎಂದು ನ್ಯಾಯಾಲಯ ಹೇಳಿದೆ.
ಫೆಬ್ರವರಿ 15 ರಂದು, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸರ್ವಾನುಮತದಿಂದ ರದ್ದುಗೊಳಿಸಿತ್ತು.
ಚುನಾವಣಾ ಬಾಂಡ್ ಯೋಜನೆಯು ದಾನಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಬಾಂಡ್‌ಗಳನ್ನು ಖರೀದಿಸಿ ಅನಾಮಧೇಯವಾಗಿ ರಾಜಕೀಯ ಪಕ್ಷಕ್ಕೆ ಹಣ ಕಳುಹಿಸಲು ಅನುವು ಮಾಡಿಕೊಡುತ್ತಿತ್ತು.
ಚುನಾವಣಾ ಬಾಂಡ್ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿತ್ತು. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿದ್ದರೆ ಸಾಕಿತ್ತು. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಅವುಗಳನ್ನು ನಿರ್ದಿಷ್ಟ ಅವಧಿಯಲ್ಲಿ ವಿತರಿಸಲಾಗುತ್ತಿತ್ತು.