ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ [ಸುಪ್ರಿಯೊ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠವು ಹತ್ತನೇ ದಿನದ ವಾದ ಆಲಿಸಿ ವಿಚಾರಣೆಯನ್ನು ಮುಕ್ತಾಯಗೊಳಿಸಿತು.
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದಿರುವುದು ಕಾನೂನಿನ ಸಮಾನ ರಕ್ಷಣೆಯನ್ನು ನಿರಾಕರಿಸಿದಂತಾಗುತ್ತದೆ ಎಂದು ಇಂದಿನ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜು ರಾಮಚಂದ್ರನ್ ತಿಳಿಸಿದರು.
ಮದುವೆಯನ್ನು ಸಮಾಜ ಸದಾ ಪುರುಷ ಮತ್ತು ಮಹಿಳೆಯ ನಡುವಿನ ಬಾಂಧವ್ಯ ಎಂದು ಪರಿಗಣಿಸುತ್ತದೆ. ಅದನ್ನು ಬದಲಿಸಬಾರದು ಎಂಬ ವಾದಕ್ಕೆ ವಿರುದ್ಧವಾಗಿ ರಾಮಚಂದ್ರನ್ ವಾದ ಮಂಡಿಸಿದರು.
"ಇದು ಸಮಾನತೆಯ ತತ್ವದ ಉಲ್ಲಂಘನೆ, ತಾರತಮ್ಯ.. ವಿಶೇಷ ವಿವಾಹ ಕಾಯಿದೆಯಲ್ಲಿನ ನಿಬಂಧನೆಗಳು ಒಬಿಸಿ ವರ್ಗಕ್ಕೆ ಸೇರಿದ ಹುಡುಗಿ ಮತ್ತು ದಲಿತ ಸಮುದಾಯಕ್ಕೆ ಸೇರಿದ ನನ್ನ ಕಕ್ಷಿದಾರರಿಗೆ ನೀಡಲಾದ ಹಕ್ಕುಗಳನ್ನು ಕನ್ನಡಿಯೊಳಗಿನ ಗಂಟಾಗಿಸುತ್ತವೆ" ಎಂದು ಅವರು ಹೇಳಿದರು.
ವಿದೇಶಿ ವಿವಾಹ ಕಾಯಿದೆಯ ಮೇಲೆ ಬೆಳಕು ಚೆಲ್ಲಿದ ಹಿರಿಯ ವಕೀಲೆ ಗೀತಾ ಲೂತ್ರಾ ವಿದೇಶದಲ್ಲಿ ವಿವಾಹವಾದ ದಂಪತಿ (ಸಲಿಂಗ) ಭಾರತದಲ್ಲಿದ್ದಾಗ ಅಪರಿಚಿತರಾಗಲು ಸಾಧ್ಯವಿಲ್ಲ ಎಂದು ವಾದಿಸಿದರು.
ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ವಿಶ್ವದ 50ಕ್ಕೂ ಹೆಚ್ಚು ದೇಶಗಳು ಸಲಿಂಗ ಜೋಡಿಗೆ ದತ್ತು ಪಡೆಯಲು ಅವಕಾಶ ಕಲ್ಪಿಸಿವೆ ಎಂದರು. ಸಲಿಂಗ ವಿವಾಹವಾದ ಜೋಡಿ ದತ್ತು ಪಡೆದರೆ ಅಂತಹ ದತ್ತುಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಯಾವುದೇ ರಕ್ಷಣ ಇಲ್ಲದಿದ್ದರೆ ಎಲ್‌ಜಿಬಿಟಿಕ್ಯು ಸಮುದಾಯಕ್ಕೆ ಸೇರಿದ ಯುವಜನರ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಅವರು ವಾದ ಮಂಡಿಸಿದರು.