Cars  
ಸುದ್ದಿಗಳು

ದೆಹಲಿ ಸುತ್ತಮುತ್ತ ಹಳೆಯ ವಾಹನ ಸಂಚಾರಕ್ಕೆ ಈ ಹಿಂದೆ ಇದ್ದ ನಿಷೇಧ ಮರುಜಾರಿಗೊಳಿಸಿದ ಸುಪ್ರೀಂ ಕೋರ್ಟ್

ಬಿಎಸ್-III ಅಥವಾ ಕಡಿಮೆ ಮಾಲಿನ್ಯ ಸೂಚ್ಯಂಕಗಳನ್ನು ಹೊಂದಿರುವ ವಾಹನಗಳು ಮತ್ತೆ ಮುಟ್ಟುಗೋಲು ಹಾಕಿಕೊಳ್ಳುವಂತಹ ಕ್ರಮಕ್ಕೆ ಒಳಪಡುತ್ತವೆ ಎಂದು ಪೀಠ ಸ್ಪಷ್ಟಪಡಿಸಿತು.

Bar & Bench

ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ಮಾಲೀಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆಗಸ್ಟ್ 12 ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಮಾರ್ಪಡಿಸಿದೆ.

ಬಿಎಸ್-III ಅಥವಾ ಕಡಿಮೆ ಮಾಲಿನ್ಯ ಸೂಚ್ಯಂಕಗಳನ್ನು ಹೊಂದಿರುವ ವಾಹನಗಳು ಮತ್ತೆ ಮುಟ್ಟುಗೋಲು ಹಾಕಿಕೊಳ್ಳುವಂತಹ ಕ್ರಮಕ್ಕೆ ಒಳಪಡುತ್ತವೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಬುಧವಾರ ಸ್ಪಷ್ಟಪಡಿಸಿದೆ.

ಆಗಸ್ಟ್ 12 ರ ಆದೇಶದಿಂದ ನೀಡಲಾಗಿದ್ದ ರಕ್ಷಣೆ ಈಗ ಬಿಎಸ್‌-IV ಅಥವಾ ಅದಕ್ಕಿಂತ ಹೆಚ್ಚಿನ ಮಾನದಂಡ ಹೊಂದಿರುವ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಹೀಗಾಗಿ, 10 ವರ್ಷಗಳಿಗಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಗಳಿಗಿಂತ ಹಳೆಯದಾದ ಮತ್ತು ಬಿಎಸ್-IV ಸೂಚ್ಯಂಕಗಳನ್ನು  ಹೊಂದಿರದ ಪೆಟ್ರೋಲ್ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.

ಆಗಸ್ಟ್ 12 ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಅರ್ಜಿ ಸಲ್ಲಿಸಿರುವ ವಿಚಾರವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ನ್ಯಾಯಾಲಯಕ್ಕೆ ತಿಳಿಸಿದರು.

ಎಲ್ಲ ವಾಹನಗಳಿಗೆ ಒಟ್ಟಾರೆ ರಕ್ಷಣೆ ನೀಡಿದ್ದರಿಂದ ಹೆಚ್ಚಿನ ಮಾಲಿನ್ಯ ಉಂಟುಮಾಡುವ ವಾಹನಗಳ ವಿರುದ್ಧ ಸರ್ಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಕಷ್ಟಕರವಾಗಿದೆ ಎಂದು ಸಿಎಕ್ಯೂಎಂ ವಾದಿಸಿತು.

ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ 2.88 ಕೋಟಿ ವಾಹನಗಳು ರಸ್ತೆಗಿಳಿಯುತ್ತವೆ. ಅವುಗಳಲ್ಲಿ ಶೇ. 93 ರಷ್ಟು ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಸೇರಿದಂತೆ ಲಘು ಮೋಟಾರು ವಾಹನಗಳಾಗಿದ್ದು ಸುಮಾರು ಶೇ. 37ರಷ್ಟು ಬಿಎಸ್ 3 ಅಥವಾ ಹಳೆಯ ಎಂಜಿನ್‌ಗಳನ್ನು ಹೊಂದಿವೆ. ಬಿಎಸ್ IV ಮತ್ತು ಅದಕ್ಕಿಂತ ಹೆಚ್ಚಿನ ಗುಣಮಟ್ಟ ಹೊಂದಿರುವ ಇತ್ತೀಚಿನ ಮಾದರಿಗಳಿಗಿಂತ ಅವು 2.5 ರಿಂದ 31 ಪಟ್ಟು ಹೆಚ್ಚು ಮಾಲಿನ್ಯಕಾರಕ ಎಂದು ಸಿಎಕ್ಯೂಎಂ ಅಫಿಡವಿಟ್‌ ತಿಳಿಸಿದೆ.