Supreme Court of India 
ಸುದ್ದಿಗಳು

ದೆಹಲಿ ಲೆ. ಗವರ್ನರ್ ಅವರಿಂದ ಪಾಲಿಕೆಗೆ ನಾಮ ನಿರ್ದೇಶಿತ ಸದಸ್ಯರ ನೇಮಕಾತಿ: ಸುಪ್ರೀಂ ಕೋರ್ಟ್‌ ಅಸ್ತು

ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರದ ಸಚಿವ ಸಂಪುಟದ ಸಹಾಯ ಸೂಚನೆ ಪಡೆದೇ ಪಾಲಿಕೆಗೆ ಹತ್ತು ಮಂದಿ ನಾಮನಿರ್ದೇಶಿತ ಸದಸ್ಯರನ್ನು ನೇಮಕಮಾಡಬೇಕಿಲ್ಲ ಎಂಬುದಾಗಿ ಪೀಠ ಹೇಳಿದೆ.

Bar & Bench

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರ ಸಚಿವ ಸಂಪುಟದ ಸಹಾಯ, ಸೂಚನೆ ಪಡೆಯದೆ ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ಹತ್ತು ಮಂದಿ ನಾಮನಿರ್ದೇಶಿತ ಸದಸ್ಯರ ನೇಮಾಕಾತಿ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ [ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಕಚೇರಿ ನಡುವಣ ಪ್ರಕರಣ ].

ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರದ ಸಚಿವ ಸಂಪುಟದ ಸಹಾಯ ಸೂಚನೆ ಪಡೆದೇ ಪಾಲಿಕೆಗೆ ಹತ್ತು ಮಂದಿ ನಾಮನಿರ್ದೇಶಿತ ಸದಸ್ಯರನ್ನು ನೇಮಕಮಾಡಬೇಕಿಲ್ಲ. ಏಕೆಂದರೆ ಈ ನಿಟ್ಟಿನಲ್ಲಿ ದೆಹಲಿ ಪಾಲಿಕೆ ಕಾಯಿದೆ ಅವರಿಗೆ ಅಧಿಕಾರ ನೀಡಿದೆ ಎಂಬುದಾಗಿ ಸಿಜೆಐ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಪಿ ಎಸ್‌ ನರಸಿಂಹ ಅವರಿದ್ದ ಪೀಠ ಹೇಳಿದೆ.

ಲೆಫ್ಟಿನೆಂಟ್‌ ಗವರ್ನರ್‌‌ ಅವರು ಶಾಸನದ ಅನ್ವಯ ಕಾರ್ಯನಿರ್ವಹಿಸುವಬೇಕೆಂದು ನಿರೀಕ್ಷಿಸಲಾಗುತ್ತದೆಯೇ ವಿನಾ ಮಂತ್ರಿಮಂಡಲದ ನೆರವು ಮತ್ತು ಸಲಹೆ ಮೂಲಕವಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಲೆ. ಗವರ್ನರ್‌ ಅವರ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ವಾದಗಳನ್ನು ಪುರಸ್ಕರಿಸಿದ ನ್ಯಾಯಾಲಯ ನಾಮಕರಣ ಕುರಿತಾಗಿ ಕಾನೂನು ಲೆ. ಗವರ್ನರ್‌ ಅವರಿಗೆ ಅಧಿಕಾರ ನೀಡಿದೆ. ಕೇಂದ್ರಾಡಳಿತ ಪ್ರದೇಶಗಳ ಆಳ್ವಿಕೆಗೆ ಲೆ.ಗವರ್ನರ್‌ ಅವರಿಗೆ ಅಧಿಕಾರ ನೀಡುವ 239ನೇ ವಿಧಿಯ ವಿನಾಯಿತಿಯಿಂದ ಕೂಡಿದೆ ಎಂದಿದೆ.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಸುಮಾರು 15 ತಿಂಗಳ ಬಳಿಕ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.

ದೆಹಲಿಯ ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಕೇಂದ್ರವೊಂದಕ್ಕೆ ಮಳೆ ನೀರು ನುಗ್ಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ ಘಟನೆ ಕುರಿತಂತೆ ದೆಹಲಿ ಪಾಲಿಕೆ ಟೀಕೆಗೆ ತುತ್ತಾಗಿರುವ ಬೆನ್ನಲ್ಲೇ ಈ ತೀರ್ಪು ಮಹತ್ವ ಪಡೆದುಕೊಂಡಿದೆ.

ಲೆ. ಗವರ್ನರ್‌ ಅವರು 1991ರಲ್ಲಿ ಚುನಾಯಿತ ಸರ್ಕಾರವನ್ನು ಸಂಪೂರ್ಣ ಬದಿಗೆ ಸರಿಸಿದ್ದರಿಂದ ಸಂವಿಧಾನದ 239 ಎಎ ವಿಧಿ ಜಾರಿಗೆ ಬಂದಿತ್ತು. ಅದಾದ ಬಳಿಕ ಚುನಾಯಿತ ಸರ್ಕಾರವನ್ನು ಸಂಪೂರ್ಣವಾಗಿ ಬದಿಗಿಟ್ಟು ಲೆ. ಗವರ್ನರ್‌ ನಾಮನಿರ್ದೇಶನ ಮಾಡಿರುವುದು  ಇದೇ ಮೊದಲು ಎಂದು ದೆಹಲಿ ಸರ್ಕಾರ ದೂರಿತ್ತು.

ಇದಲ್ಲದೆ, ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಲು ಎಲ್‌ಜಿ ಬದ್ಧರಾಗಿರಬೇಕು.  ಭಿನ್ನಾಭಿಪ್ರಾಯವಿದ್ದಲ್ಲಿ ಅವರು ಸಮಸ್ಯೆಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಬಹುದು ಎಂದು ಸರ್ಕಾರದ ಅರ್ಜಿ ತಿಳಿಸಿತ್ತು.

ಕಳೆದ ವರ್ಷ ಮಾರ್ಚ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್   ದೆಹಲಿ ಲೆ. ಗವರ್ನರ್‌ ವಿಕೆ ಸಕ್ಸೇನಾ ಅವರ ಪ್ರತಿಕ್ರಿಯೆ ಕೇಳಿತ್ತು. ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್‌ ಅವರು ಇಂತಹ ನಾಮನಿರ್ದೇಶನ ದೆಹಲಿ ಪಾಲಿಕೆಯ ಪ್ರಜಾಸತ್ತಾತ್ಮಕ ಕಾರ್ಯವನ್ನು ಅಸ್ಥಿರಗೊಳಿಸಬಹುದು ಎಂದಿದ್ದರು. ಮೇ 2023ರಲ್ಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.

ತೀರ್ಪು ಬಾಕಿ ಇರುವ ಕಾರಣಕ್ಕೆ, ಪಾಲಿಕೆಯ ಸ್ಥಾಯಿ ಸಮಿತಿಯನ್ನು ರಚಿಸಲು ಸಾಧ್ಯವಾಗಿರಲಿಲ್ಲ. ಹತ್ತು ನಾಮ ನಿರ್ದೇಶಿತ ಸದಸ್ಯರೇ ಈ ಸಮಿತಿಯನ್ನು ಆಯ್ಕೆ ಮಾಡುವ ಅಂಗದ ಭಾಗವಾಗಿದ್ದರು.

ಪಾಲಿಕೆ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ ಎಂದು ಮೇಯರ್ ಶೆಲ್ಲಿ ಒಬೆರಾಯ್  ಕಳವಳ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಸ್ಥಾಯಿ ಸಮಿತಿಯ ಕಾರ್ಯಗಳನ್ನು ನಿರ್ವಹಿಸಲು ಪಾಲಿಕೆಗೆ ಅನುಮತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದರು.

ದೆಹಲಿ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಕೀಲ ಶದಾನ್ ಫರಾಸತ್ ಮತ್ತು ನತಾಶಾ ಮಹೇಶ್ವರಿ ವಾದ ಮಂಡಿಸಿದ್ದರು. ಲೆ. ಗವರ್ನರ್‌ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಪ್ರತಿನಿಧಿಸಿದ್ದರು.