ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಿಸುವುದನ್ನು ಏಕೆ ಪರಿಗಣಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮೌಖಿಕವಾಗಿ ಪ್ರಶ್ನಿಸಿದೆ [ ಶೈಲೇಶ್ ಬಾಬುಲಾಲ್ ಭಟ್ ಮತ್ತು ಗುಜರಾತ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಕ್ರಿಪ್ಟೋಕರೆನ್ಸಿಯನ್ನು ಸಂಪೂರ್ಣ ಸ್ಥಗಿತಗೊಳಿಸಬೇಕೆಂದು ಯಾರೂ ಹೇಳುವುದಿಲ್ಲ ಏಕೆಂದರೆ ಅದು ವಿವೇಕಯುತವಲ್ಲದೇ ಇರಬಹುದು ಆದರೆ ನಿಯಂತ್ರಕ ಕ್ರಮ ಮತ್ತು ಮೇಲ್ವಿಚಾರಣೆ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ತಿಳಿಸಿತು. ತಜ್ಞರೊಂದಿಗೆ ಸಮಾಲೋಚಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅದು ಹೇಳಿತು.
ಬಿಟ್‌ಕಾಯಿನ್ ವ್ಯಾಪಾರ ಲಾಭದ ಮೇಲೆ ಪ್ರಸ್ತುತ ಶೇಕಡಾ 30 ರಷ್ಟು ತೆರಿಗೆ ವಿಧಿಸುವುದು ಒಂದು ರೀತಿಯ ಕಾನೂನು ಮಾನ್ಯತೆಯನ್ನು ಹೇಳುತ್ತದೆ. ಇದನ್ನು ಈಗಾಗಲೇ ಈ ರೀತಿ ಅಂಗೀಕರಿಸಿದ್ದ ಮೇಲೆ ಇದನ್ನು ಏಕೆ ನಿಯಂತ್ರಿಸಬಾರದು ಎಂದು ನ್ಯಾಯಾಲಯ ಕೇಳಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಕಾಂತ್, ಕ್ರಿಪ್ಟೋಕರೆನ್ಸಿ ಪ್ರಕರಣಗಳನ್ನು ನಿರ್ವಹಿಸುವಾಗ ನ್ಯಾಯಾಲಯಗಳು ಪ್ರಾಯೋಗಿಕ ಸವಾಲುಗಳನ್ನು ಎದುರಿಸುತ್ತಿವೆ ಎಂದು ಹೇಳಿದರು. ಈ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಸೂಚನೆಗಳನ್ನು ಪಡೆಯುವುದಾಗಿ ಎಎಸ್‌ಜಿ ಭಾಟಿ ಉತ್ತರಿಸಿದರು.
ಅಂತರರಾಜ್ಯ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣವೊಂದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ನ್ಯಾಯಾಲಯದ ಮುಂದೆ ದಾವೆ ಹೂಡಿರುವ ವ್ಯಕ್ತಿಯ ಮೇಲೆ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿದ ಆರೋಪ ಕೇಳಿಬಂದಿತ್ತು. 2018ರ ಆರಂಭದಲ್ಲಿ ಬಿಟ್‌ಕನೆಕ್ಟ್ ಇಬ್ಬರು ಉದ್ಯೋಗಿಗಳನ್ನು ಅಪಹರಿಸಿ, ಅವರಿಂದ 2,091 ಬಿಟ್ ಕಾಯಿನ್‌ಗಳು, 11,000 ಲಿಟ್ ಕಾಯಿನ್‌ಗಳು ಮತ್ತು ₹14.5 ಕೋಟಿ ನಗದನ್ನು ದಾವೆದಾರ ಅಪಹರಿಸಿರುವ ಆರೋಪ ಮಾಡಲಾಗಿತ್ತು. ಕ್ರಿಪ್ಟೋ ಕರೆನ್ಸಿ ಜಾಲತಾಣ, ಬಿಟ್ ಕನೆಕ್ಟ್ ಲಿಮಿಟೆಡ್‌ನ ಹೂಡಿಕೆಯಿಂದ ಉಂಟಾದ ನಷ್ಟ ಸರಿದೂಗಿಸಿಕೊಳ್ಳಲು ಆತ ಈ ರೀತಿ ಮಾಡಿದ್ದ ಎನ್ನಲಾಗಿತ್ತು.
ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಭಾಟಿ ಅವರು ಈ ಪ್ರಕರಣದ ತನಿಖೆಯ ಪ್ರಗತಿಯ ವರದಿ ಮತ್ತು ಕ್ರಿಪೋಕರೆನ್ಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವನ್ನು ಜುಲೈ ವೇಳೆಗೆ ಸಲ್ಲಿಸಲಾಗುವುದು ಎಂದರು. ಪ್ರಕರಣದ ಮುಂದಿನ ವಿಚಾರಣೆ ಮೇ 30ರಂದು ನಡೆಯಲಿದೆ.