ಸುದ್ದಿಗಳು

ಪತ್ರಕರ್ತ ಜುಬೈರ್‌ ವಿರುದ್ಧ 'ದುಷ್ಟ ಕ್ರಮಗಳ ಸರಣಿ': ಆತುರದ ಹೆಜ್ಜೆ ಇರಿಸದಂತೆ ಯುಪಿ ಪೊಲೀಸರಿಗೆ ಸುಪ್ರೀಂ ತಾಕೀತು

ಸೀತಾಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಬೈರ್ ಅವರಿಗೆ ಪೀಠ ಈ ಹಿಂದೆ ಜಾಮೀನು ನೀಡಿತ್ತು.

Bar & Bench

ಪತ್ರಕರ್ತ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ವಿರುದ್ಧ ಉತ್ತರ ಪ್ರದೇಶ ಪೊಲೀಸರು (ಯುಪಿ ಪೊಲೀಸ್) ದಾಖಲಿಸಿರುವ 5 ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ʼಆತುರದ ಕ್ರಮʼ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿದೆ.

ಸೀತಾಪುರದಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಪತ್ರಕರ್ತ ಜುಬೈರ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ ಅವರ ವಿರುದ್ಧ 'ದುಷ್ಟ ಕ್ರಮಗಳ ಸರಣಿ'ಯನ್ನೇ ಎಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಹೇಳಿದೆ.

ಜುಲೈ 20, 2022ಕ್ಕೆ ಪ್ರಕರಣ ಪಟ್ಟಿ ಮಾಡಲು ರಿಜಿಸ್ಟ್ರಿಗೆ ಸೂಚಿಸುತ್ತಿದ್ದೇವೆ. ಅಲ್ಲಿಯವರೆಗೂ ಅರ್ಜಿದಾರರ ವಿರುದ್ಧ ಯಾವುದೇ ವಿವೇಚನಾರಹಿತ ಆತುರದ ಕ್ರಮವನ್ನು ಕೈಗೊಳ್ಳಬಾರದು, ನ್ಯಾಯಾಲಯದ ಗಮನಕ್ಕೆ ತರದೆ ಮುಂದಾಗಬಾರದು ಎಂದು ಸೂಚಿಸಿತು. ಪ್ರಕರಣದಲ್ಲಿ ನೋಟಿಸ್‌ ನೀಡಲು ತಿಳಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಮಾಡಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೋರಿತು.

“ಒಂದು ಪ್ರಕರಣದಲ್ಲಿ ಜುಬೈರ್‌ಗೆ ಜಾಮೀನು ನೀಡಿದರೆ ಅವರ ವಿರುದ್ಧ ಮತ್ತೊಂದು ಪ್ರಕರಣ ಹೂಡಲಾಗುತ್ತಿದೆ. ಹೀಗೆ ವಿಷ ವರ್ತುಲ ಮುಂದುವರೆದಿದೆ” ಎಂದು ವಿಚಾರಣೆ ವೇಳೆ ನ್ಯಾ. ಚಂದ್ರಚೂಡ್‌ ಅಭಿಪ್ರಾಯಪಟ್ಟರು.

ಇಂದು ಹೊರಡಿಸಿರುವ ಆದೇಶದ ಪ್ರಕಾರ ಪೊಲೀಸರು ಹೊಸದಾಗಿ ಜುಬೈರ್‌ ಅವರನ್ನು ಬಂಧಿಸುವುದಾಗಲೀ, ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಲೀ ಮಾಡುವಂತಿಲ್ಲ ಆದರೆ ಈಗಾಗಲೇ ನ್ಯಾಯಾಂಗ ಬಂಧನ ಅನುಭವಿಸುತ್ತಿರುವ ಪ್ರಕರಣಗಳಲ್ಲಿ ಜುಬೈರ್‌ಗೆ ಇನ್ನೂ ಜಾಮೀನು ದೊರೆಯದ ಕಾರಣ ಅವರು ಜೈಲಿನಲ್ಲಿಯೇ ಇರಬೇಕಿದೆ. ಹಾಥ್‌ರಸ್‌, ಗಾಜಿಯಾಬಾದ್‌, ಮುಜಾಫರ್‌ನಗರ, ಲಖಿಂಪುರ್‌ ಖೇರಿ ಹಾಗೂ ಸೀತಾಪುರಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.