ತನ್ನ ವಿರುದ್ಧದ 6 ಎಫ್ಐಆರ್‌ ರದ್ದತಿ ಕೋರಿ ಪತ್ರಕರ್ತ ಜುಬೈರ್ ಅರ್ಜಿ ಸಲ್ಲಿಕೆ; ವಿಚಾರಣೆ ನಡೆಸಲಿರುವ ಸುಪ್ರೀಂ

ಪ್ರಕರಣವನ್ನು ಸಿಜೆಐ ಎನ್‌ ವಿ ರಮಣ ಅವರ ಮುಂದೆ ಪ್ರಸ್ತಾಪಿಸಿದಾಗ ಅವರು ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಿಲಿದೆ ಎಂದು ತಿಳಿಸಿದರು.
Mohammed Zubair and Supreme Court
Mohammed Zubair and Supreme Court
Published on

ಉತ್ತರ ಪ್ರದೇಶ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಆರು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಪತ್ರಕರ್ತ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡುವಂತೆ ಸುಪ್ರೀಂ ಕೊರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಸೋಮವಾರ ಆದೇಶಿಸಿದ್ದಾರೆ.

ಜುಬೈರ್‌ ಪತ್ರಕರ್ತರಾಗಿದ್ದು, (ಸುದ್ದಿಯ) ಸತ್ಯಾಸತ್ಯತೆ ಪರಿಶೀಲಕರೂ ಕೂಡ. ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣವನ್ನು ಇಂದೇ ವಿಚಾರಣೆ ನಡೆಸಲು ಕೋರಬಹುದೇ ಎಂದು ವಕೀಲೆ ವೃಂದಾ ಗ್ರೋವರ್ ಅವರು ಸಿಜೆಐ ಅವರೆದುರು ಪ್ರಕರಣ ಪ್ರಸ್ತಾಪಿಸಿದರು.

Also Read
ಆಲ್ಟ್‌ನ್ಯೂಸ್‌ ಸಹ ಸಂಸ್ಥಾಪಕ ಜುಬೈರ್ ವಿರುದ್ಧದ ಪ್ರಕರಣಗಳ ತನಿಖೆ: ಎಸ್ಐಟಿ ರಚಿಸಿದ ಉತ್ತರಪ್ರದೇಶ ಪೊಲೀಸರು

ವೃಂದಾ ಅವರ ಮನವಿಗೆ ಸಿಜೆಐ "ಇವತ್ತಲ್ಲ... ನ್ಯಾ. ಡಿವೈ ಚಂದ್ರಚೂಡ್ ಅವರಿರುವ ಪೀಠದ ಮುಂದೆ ಪ್ರಕರಣವನ್ನು ಉಲ್ಲೇಖಿಸಿ. ನಾನು ಇದನ್ನು ನ್ಯಾ. ಚಂದ್ರಚೂಡ್ ಅವರ ಪೀಠದೆದುರು ಪಟ್ಟಿ ಮಾಡುತ್ತಿದ್ದೇನೆ" ಎಂದು ಹೇಳಿದರು.

ಈಗಾಗಲೇ ಮಧ್ಯಂತರ ಜಾಮೀನು ಪಡೆದಿರುವ ಆರು ಎಫ್‌ಐಆರ್‌ಗಳಲ್ಲಿ ಒಂದನ್ನು ರದ್ದುಗೊಳಿಸುವಂತೆ ಕೋರಿ ಜುಬೈರ್‌ ಸಲ್ಲಿಸಿರುವ ಅರ್ಜಿಯೊಂದನ್ನು ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ.

ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪ್ರಕರಣದೊಂದಿಗೆ ಸೇರಿಸಿ ವಿಚಾರಣೆ ನಡೆಸುವಂತೆ ಜುಬೈರ್‌ ಕೋರಿದ್ದಾರೆ. ಅಲ್ಲದೆ ಎಲ್ಲಾ 6 ಎಫ್‌ಐಆರ್‌ಗಳಲ್ಲಿ ಮಧ್ಯಂತರ ಜಾಮೀನಿಗಾಗಿ ಅವರು ಪ್ರಾರ್ಥಿಸಿದ್ದಾರೆ. ಜೊತೆಗೆ, ಆರು ಪ್ರಕರಣಗಳ ತನಿಖೆಗೆ ಯುಪಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದನ್ನು ಕೂಡ ಅವರು ಪ್ರಶ್ನಿಸಿದ್ದಾರೆ. ಹಾಥ್‌ರಸ್‌, ಗಾಜಿಯಾಬಾದ್‌, ಮುಜಾಫರ್‌ನಗರ, ಲಖಿಂಪುರ್‌ ಖೇರಿ ಹಾಗೂ ಸೀತಾಪುರಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೀತಾಪುರ ಪ್ರಕರಣದಲ್ಲಿ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.

Kannada Bar & Bench
kannada.barandbench.com