Supreme Court and TV 
ಸುದ್ದಿಗಳು

ಟಿವಿ ಚಾನೆಲ್‌ಗಳ ಸ್ವಯಂ ನಿಯಂತ್ರಣ ಬಲಪಡಿಸಲು ಮಾರ್ಗಸೂಚಿ; ₹ 1 ಲಕ್ಷ ದಂಡ ನಿಷ್ಪರಿಣಾಮಕಾರಿ: ಸುಪ್ರೀಂ

ನಿಯಮಗಳನ್ನು ಕಟ್ಟುನಿಟ್ಟಾಗಿ ರೂಪಿಸದೆ ಹೋದರೆ ಟಿವಿ ಚಾನೆಲ್‌ಗಳಿಗೆ ಅವುಗಳನ್ನು ಪಾಲಿಸುವ ಒತ್ತಾಯ ಇರುವುದಿಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.

Bar & Bench

ಟಿವಿ ಚಾನೆಲ್‌ಗಳ ಸ್ವ ನಿಯಂತ್ರಣ ನಿಷ್ಪರಿಣಾಮಕಾರಿಯಾಗಿರುವುದು ಸಾಬೀತಾಗಿದೆ ಎಂದು ಸೋಮವಾರ ತಿಳಿಸಿರುವ ಸುಪ್ರೀಂ ಕೋರ್ಟ್‌ ಟಿವಿ ವಾಹಿನಿಗಳ ನಿಯಂತ್ರಣ ಬಲಪಡಿಸಲು ತಾನು ಮಾರ್ಗಸೂಚಿ ರೂಪಿಸುವುದಾಗಿ ಹೇಳಿದೆ. 

ನಿಯಮಗಳನ್ನು ಕಟ್ಟುನಿಟ್ಟಾಗಿ ರೂಪಿಸದೇ ಹೋದರೆ ಟಿವಿ ಚಾನೆಲ್‌ಗಳಿಗೆ ಅವುಗಳನ್ನು ಪಾಲಿಸಲು ಒತ್ತಾಯ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

"ಟಿವಿ ಚಾನೆಲ್‌ಗಳು ಸ್ವಯಂ ಸಂಯಮದಿಂದ ವರ್ತಿಸುತ್ತವೆ ಎಂದು ನೀವು ಹೇಳುತ್ತೀರಿ. ನ್ಯಾಯಾಲಯದಲ್ಲಿರುವ ಎಷ್ಟು ಮಂದಿ ನಿಮ್ಮ ಮಾತನ್ನು ಒಪ್ಪುತ್ತಾರೆ ಎಂದು ಗೊತ್ತಿಲ್ಲ… ನೀವು ವಿಧಿಸಿದ ದಂಡ ಎಷ್ಟು? ₹ 1 ಲಕ್ಷ!   ದಿನವೊಂದಕ್ಕೆ ಚಾನೆಲ್ ಎಷ್ಟು ಗಳಿಸುತ್ತದೆ. ನೀವು ನಿಯಮಗಳನ್ನು ಕಟ್ಟುನಿಟ್ಟಾಗಿ ರೂಪಿಸದ ಹೊರತು ಟಿವಿ ಚಾನೆಲ್‌ಗಳಿಗೆ ಅವುಗಳನ್ನು ಪಾಲಿಸುವ ಒತ್ತಾಯ ಇರುವುದಿಲ್ಲ. ನಿಯಮ ಉಲ್ಲಂಘನೆಗಾಗಿ ಒಂದು ಲಕ್ಷ ದಂಡ ವಿಧಿಸಿದ ಬಳಿಕ ಅವುಗಳನ್ನು ತಡೆಯಲು ಏನಿದೆ?" ಎಂದು ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು.

ಹೀಗಾಗಿ ಸ್ವ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸುವುದಾಗಿ ತಿಳಿಸಿದ ಪೀಠ ಎನ್‌ಬಿಎ ಮಾರ್ಗಸೂಚಿ  ಉಲ್ಲಂಘಿಸಿದ್ದಕ್ಕಾಗಿ ಸುದ್ದಿ ವಾಹಿನಿಗಳಿಗೆ ವಿಧಿಸಲಾಗುವ ಈಗಿನ ₹ 1 ಲಕ್ಷ ದಂಡದ ಬಗ್ಗೆ ಸಲಹೆಗಳನ್ನು ಕೇಳಿತು.

ಟಿವಿ ಚಾನೆಲ್‌ಗಳ ಸ್ವಯಂ ನಿಯಂತ್ರಣದ ಕುರಿತು ನ್ಯಾಯಮೂರ್ತಿಗಳಾದ  ಎ ಕೆ ಸಿಖ್ರಿ ಮತ್ತು ಆರ್‌ ವಿ ರವೀಂದ್ರನ್‌ ಅವರಿಂದ ಸಲಹೆಗಳನ್ನು ಪಡೆಯಬೇಕು. ಇದಕ್ಕೆ ಕೇಂದ್ರ ಸರ್ಕಾರ ಪ್ರತಿ- ಅಫಿಡವಿಟ್‌ ಸಲ್ಲಿಸಬೇಕು ಎಂದು ಸುದ್ದಿ ಪ್ರಸಾರಕರ ಸಂಸ್ಥೆ (ಎನ್‌ಬಿಎ) ಪರವಾಗಿ ಹಾಜರಾದ ಹಿರಿಯ ವಕೀಲ ಅರವಿಂದ್ ದಾತಾರ್ ಅವರಿಗೆ ನ್ಯಾಯಾಲಯ ಸೂಚಿಸಿತು.

ಟಿವಿ ವಾಹಿನಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತನಗೆ ಹೆಚ್ಚಿನ ಅಧಿಕಾರ ಇಲ್ಲ ಎಂಬ ಪ್ರತಿಕೂಲ ಅವಲೋಕನಗಳನ್ನು ಒಳಗೊಂಡಿದ್ದ ಬಾಂಬೆ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಎನ್‌ಬಿಎ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು.