Supreme Court and Mobile Phone 
ಸುದ್ದಿಗಳು

ಬೆಟ್ಟಿಂಗ್ ಆ್ಯಪ್ ನಿಷೇಧ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಪೀಠ ಅಗತ್ಯವೆಂದು ಭಾವಿಸಿದರೆ, ನಂತರದ ಹಂತದಲ್ಲಿ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿತು.

Bar & Bench

ಬೆಟ್ಟಿಂಗ್ ಅಪ್ಲಿಕೇಶನ್‌ಗಳ ನಿಷೇಧ ಹೇರುವ ಜೊತೆಗೆ ಆನ್‌ಲೈನ್ ಗೇಮಿಂಗ್ ಹಾಗೂ  ಫ್ಯಾಂಟಸಿ ಕ್ರೀಡೆಗಳಿಗೆ ಕಠಿಣ ನಿಯಮ ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಡಾ. ಕೆ.ಎ. ಪಾಲ್ @ ಕಿಲಾರಿ ಆನಂದ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್‌ ಕೆ ಸಿಂಗ್ ಅವರನ್ನೊಳಗೊಂಡ ಪೀಠ ಅಗತ್ಯವೆಂದು ಭಾವಿಸಿದರೆ, ನಂತರದ ಹಂತದಲ್ಲಿ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿತು.

ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಖುದ್ದು ಹಾಜರಾದ ಕ್ರೈಸ್ತ ಧರ್ಮ ಸುವಾರ್ತಾಬೋಧಕ ಮತ್ತು ರಾಜಕಾರಣಿ ಡಾ. ಕೆ ಎ ಪಾಲ್ ಅರ್ಜಿ ಸಲ್ಲಿಸಿದರು. ಆನ್ಲೈನ್ ಬೆಟ್ಟಿಂಗ್ ಯುವಜನರ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ. ಆನ್ಲೈನ್ ಬೆಟ್ಟಿಂಗ್‌ನ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿಲ್ಲ. ಬೆಟ್ಟಿಂಗ್‌ಗಾಗಿ ಸಾಲ ಮಾಡಿ ತೆಲಂಗಾಣದಲ್ಲಿ 24 ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಲಾಯಿತು.

ಈ ಅಪ್ಲಿಕೇಷನ್‌ಗಳಿಗೆ ಖ್ಯಾತನಾಮರು ಪ್ರಚಾರ ನೀಡಿ ಇವು ಸ್ವೀಕಾರಾರ್ಹ ಎಂಬ ಭಾವನೆ ಬಿತ್ತುತ್ತಿದ್ದಾರೆ. ಬೆಟ್ಟಿಂಗ್‌ ಅನ್ನು ಜೂಜಾಟದ ವ್ಯಾಪ್ತಿಗೆ ತಂದು ಸಮಗ್ರ ನಿಯಂತ್ರಕ ಕಾಯಿದೆ ಜಾರಿಗೆ ತರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ವಾದ ಆಲಿಸಿದ ನ್ಯಾಯಾಲಯ ಡಿಜಿಟಲ್‌ ಲಭ್ಯತೆಯು ಕೌಟುಂಬಿಕ ಸ್ವರೂಪ ಮತ್ತು ಸಾಮಾಜಿಕ ನಡವಳಿಕೆಯನ್ನು ಬದಲಿಸುತ್ತಿದೆ ಎಂದಿತು. ಆದರೆ ಅರ್ಜಿದಾರರು ಕೋರಿದ ಮಧ್ಯಂತರ ಪರಿಹಾರಕ್ಕೆ ನ್ಯಾಯಾಲಯ ನಕಾರ ವ್ಯಕ್ತಪಡಿಸಿತು.