ಕುದುರೆ ರೇಸ್‌ ಆಯೋಜನೆಗೆ ಅನುಮತಿ ಕೋರಿಕೆ: 10 ದಿನಗಳಲ್ಲಿ ನಿರ್ಧರಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

161 ವರ್ಷಗಳಿಂದ ರೇಸ್ ಕೋರ್ಸ್‌ನಲ್ಲಿ ಕುದುರೆ ರೇಸ್‌ ನಡೆಯುತ್ತಿವೆ. 72 ವರ್ಷಗಳಿಂದ ಪಂದ್ಯಗಳ ಆಯೋಜನೆಗೆ ಸರ್ಕಾರ ಪರವಾನಿಗೆ ನೀಡುತ್ತಿದೆ. ಷರತ್ತು ವಿಧಿಸಿ ಪರವಾನಿಗೆ ನೀಡಬೇಕಿರುವುದರಿಂದ ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದ ಎಜಿ.
Horse race
Horse race

ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ರೇಸ್ ಕೋರ್ಸ್) ಕುದುರೆ ಪಂದ್ಯಾವಳಿ ಆಯೋಜನೆಗೆ ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ಮುಂದಿನ 10 ದಿನಗಳಲ್ಲಿ ಪರಿಗಣಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕುದುರೆ ರೇಸ್‌ ಆಯೋಜನೆಗೆ ಪರವಾನಿಗೆ ನೀಡದ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್‌ ಕ್ಲಬ್ ಲಿಮಿಟೆಡ್, ಕರ್ನಾಟಕ ರೇಸ್ ಹಾರ್ಸಸ್‌ ಓನರ್ಸ್‌ ಅಸೋಸಿಯೇಷನ್ ಮತ್ತು ಕರ್ನಾಟಕ ಟ್ರೈನರ್ಸ್‌ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ರಜಾಕಾಲೀನ ಏಸಕದಸ್ಯ ಪೀಠ ನಡೆಸಿತು.

“30 ದಿನಗಳ ಅವಧಿಗೆ ಮಾತ್ರ ಪರವಾನಗಿ ನೀಡುವುದರಿಂದ ರಾಜ್ಯವು ಸೂಕ್ತ ಸಮಯದೊಳಗೆ ತಕ್ಷಣ ಕ್ರಮಕೈಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅದೇನೆ ಇದ್ದರೂ, ಅಡ್ವೊಕೇಟ್‌ ಜನರಲ್‌ ಕೋರಿಕೆಯ ಮೇರೆಗೆ ಅರ್ಜಿಯ ಪರಿಗಣನೆಗೆ ನ್ಯಾಯಾಲಯವು ಜೂನ್ 4ರವರೆಗೆ ಸಮಯಾವಕಾಶ ನೀಡಿದೆ. ಅದರೊಳಗೆ ಯಾವುದೇ ವಿಳಂಬವಿಲ್ಲದೆ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಅರ್ಜಿದಾರರಿಗೆ ತಿಳಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಕುದುರೆ ರೇಸ್‌ ಆಯೋಜನೆಗೆ ಪರವಾನಿಗೆ ಕುರಿತಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸುಮಾರು ಎರಡು ತಾಸು ಚರ್ಚೆಯಾಗಿದೆ. ಈ ಕುರಿತು ಇತರೆ ಪಾಲುದಾರರೊಂದಿಗೆ ಚರ್ಚೆ ನಡೆಸಬೇಕಾಗಿದ್ದು, ಅಕ್ರಮ ತಡೆಗಾಗಿ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬೇಕಾಗಿದೆ. ಕುದುರೆ ರೇಸ್‌ ನೆಪದಲ್ಲಿ ಕೆಲ ಆಕ್ಷೇಪಾರ್ಹ ಚಟುವಟಿಕೆ ನಡೆಸುತ್ತಿರುವುದರಿಂದ ಪರವಾನಗಿ ನೀಡುವುದು ವಿಳಂಬವಾಗಿದೆ” ಎಂದರು.

ಮುಂದುವರಿದು, “161 ವರ್ಷದಿಂದ ರೇಸ್ ಕೋರ್ಸ್‌ನಲ್ಲಿ ಕುದುರೆ ಪಂದ್ಯಾವಳಿ ನಡೆಯುತ್ತಿವೆ. 72 ವರ್ಷಗಳಿಂದ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಪರವಾನಿಗೆ ನೀಡುತ್ತಿದೆ. ಷರತ್ತು ವಿಧಿಸಿ ಪರವಾನಿಗೆ ನೀಡಬೇಕಿರುವುದರಿಂದ ನಾಲ್ಕು ವಾರ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

ಅರ್ಜಿದಾರರ ಪರ ಹಿರಿಯ ವಕೀಲರಾದ ಕೆ ಎನ್‌ ಫಣೀಂದ್ರ ಮತ್ತು ಶ್ರೀರಂಗ ಅವರು “ರೇಸ್‌ ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿಗಳು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸದಸ್ಯರಾಗಿದ್ದಾರೆ. ಕುದುರೆ ಪಂದ್ಯಗಳ ಆಯೋಜನೆಯ ಎಲ್ಲ ಚಟುವಟಿಕೆಗಳು ಸರ್ಕಾರಕ್ಕೆ ಗೊತ್ತಾಗಲಿದ್ದು, ಅಕ್ರಮ ನಡೆಯುವ ಸಾಧ್ಯತೆ ಇಲ್ಲ” ಎಂದು ವಿವರಿಸಿದರು.

Also Read
ಕುದುರೆ ರೇಸ್‌ಗೆ ಷರತ್ತು ಬದ್ಧ ಅನುಮತಿಗೆ ಕೋರಿಕೆ: ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

“ತೆರಿಗೆ ವಂಚನೆಗಾಗಿ ಅಕ್ರಮವಾಗಿ ಬೆಟ್ಟಿಂಗ್ ಮಾಡಿದ ಆರೋಪ ಸಂಬಂಧ ಕೆಲವು ಬುಕ್ಕಿಗಳ ಪರವಾನಗಿ ರದ್ದುಪಡಿಸುವುದಕ್ಕಾಗಿ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ, ಕುದುರೆ ಪಂದ್ಯಗಳ ಆಯೋಜನೆಗೆ ಅವಕಾಶ ಕಲ್ಪಿಸಬೇಕು” ಎಂದು ಪೀಠಕ್ಕೆ ಕೋರಿದರು.

ಪ್ರಕರಣದ ಹಿನ್ನೆಲೆ: ಪ್ರತಿ ವರ್ಷ ಕುದುರೆ ಪಂದ್ಯಗಳ ಆಯೋಜನೆಗೆ ತಿಂಗಳಿಗೊಮ್ಮೆ ಪರವಾನಗಿ ಪಡೆಯುವುದು ಸಾಮಾನ್ಯ. ಆದರೆ, ಮಾರ್ಚ್ ಬಳಿಕ ಕುದುರೆ ಪಂದ್ಯಗಳ ಆಯೋಜನೆಗೆ ಸರ್ಕಾರ ಅನುಮತಿ ನೀಡಿರಲಿಲ್ಲ. ಇದಾದ ಬಳಿಕ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಮನವಿಯ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುದರೆ ಪಂದ್ಯಾವಳಿಗಳಿಲ್ಲದೆ ಇದನ್ನೇ ಅವಲಂಬಿಸಿದ್ದ ಸುಮಾರು 2,000 ಸಿಬ್ಬಂದಿ ಜೀವನೋಪಾಯಕ್ಕೆ ತೊಂದರೆಯಾಗಿದೆ. ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

Kannada Bar & Bench
kannada.barandbench.com