Students exam  
ಸುದ್ದಿಗಳು

ಎಸ್‌ಎಸ್‌ಸಿ ಪರೀಕ್ಷೆ ಅಕ್ರಮ ಪ್ರಶ್ನಿಸಿ ಪಿಐಎಲ್: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ಪರೀಕ್ಷೆಯ ತಾಂತ್ರಿಕ ಪಾಲುದಾರನನ್ನಾಗಿ ಟಿಸಿಎಸ್ ಬದಲು ಎಜುಕ್ವಿಟಿಯನ್ನು ನೇಮಿಸಿಕೊಂಡ ಬಳಿಕ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

Bar & Bench

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಪರೀಕ್ಷೆಗಳನ್ನು ಸುಗಮ ರೀತಿಯಲ್ಲಿ ನಡೆಸಲು ನಿರ್ದೇಶನ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್‌ ಸೆಪ್ಟೆಂಬರ್‌ 4ರಂದು ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿ ಮಾಡಿದೆ [ನಿಖಿಲ್‌ ಕುಮಾರ್‌ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]

ಪರೀಕ್ಷೆ ಆಕಾಂಕ್ಷಿಗಳಲ್ಲಿ ಒಬ್ಬರಾದ ನಿಖಿಲ್ ಕುಮಾರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠ ಕೇಂದ್ರ ಸರ್ಕಾರ ಮತ್ತು ಎಸ್‌ಎಸ್‌ಸಿಗೆ ನೋಟಿಸ್‌ ನೀಡಿದೆ.

ಎಸ್‌ಎಸ್‌ಸಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು ಈ ಹಿಂದಿನ ತಾಂತ್ರಿಕ ಪಾಲುದಾರ  ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಬದಲು ಎಜುಕ್ವಿಟಿ ಕೆರಿಯರ್ ಟೆಕ್ನಾಲಜೀಸ್‌ಗೆ ಅವಕಾಶ ನೀಡಿದ ಬಳಿಕ ಪರೀಕ್ಷೆಗಳಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಪರೀಕ್ಷೆಯಲ್ಲಿ ಕಂಪ್ಯೂಟರ್‌ ಪರದೆ ಸ್ಥಗಿತಗೊಳ್ಳುವುದು, ಬಯೋಮೆಟ್ರಿಕ್‌ ರೀತಿಯ ವ್ಯತ್ಯಯದಂತಹ ತಾಂತ್ರಿಕ ದೋಷಗಳು; ಪರೀಕ್ಷಾ ಕೇಂದ್ರದ ಮಾಹಿತಿ ತಪ್ಪಾಗಿ ನೀಡುವುದು, ತಡವಾಗಿ ಅಡ್ಮಿಟ್‌ ಕಾರ್ಡ್‌ ನೀಡುವಂತಹ ಆಡಳಿತಾತ್ಮಕ ಲೋಪಗಳು; ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿದೆ. 59,500 ಅಭ್ಯರ್ಥಿಗಳು ಈ ಅಡಚಣೆಗಳಿಂದ ಬಾಧಿತರಾಗಿದ್ದಾರೆ ಎಂದು ಖುದ್ದು ಎಸ್‌ಎಸ್‌ಸಿಯೇ ಒಪ್ಪಿಕೊಂಡಿದೆ ಎಂಬುದಾಗಿ ಅರ್ಜಿದಾರರು ದೂರಿದ್ದಾರೆ.

ಟಿಸಿಎಸ್ ಪಾರದರ್ಶಕ ಮತ್ತು ಹೆಚ್ಚಾಗಿ ದೋಷರಹಿತ ಪರೀಕ್ಷಾ ಪ್ರಕ್ರಿಯೆಗಳನ್ನು ಕಾಯ್ದುಕೊಂಡಿದ್ದರೂ, ಎಜುಕ್ವಿಟಿಯನ್ನು ದಿಢೀರನೆ ನೇಮಕ ಮಾಡಿಕೊಂಡಿದ್ದು ತೀವ್ರ ಅಡಚಣೆಗಳಿಗೆ ಕಾರಣವಾಗಿದೆ ಎಂದು ಅರ್ಜಿ ತಿಳಿಸಿದೆ.

ನ್ಯಾಯಾಲಯ ನೇಮಿಸಿದ ಸ್ವತಂತ್ರ ಸಮಿತಿಯೇ ಎಸ್‌ಎಸ್‌ಸಿ ಪರೀಕ್ಷೆಗಳ ಮೇಲ್ವಿಚಾರಣೆ ಮಾಡಬೇಕು. ಎಜುಕ್ವಿಟಿ ಸಂಸ್ಥೆ ನಡೆಸಿದ ಪರೀಕ್ಷೆಗಳನ್ನು ರದ್ದುಗೊಳಿಸಿ ಪುನ: ಆ ಪರೀಕ್ಷೆಗಳನ್ನು ಆಯೋಜಿಸಬೇಕು ಎಂದು ಅದು ಕೋರಿದೆ.

2018ರಲ್ಲಿ, ಎಸ್‌ಎಸ್‌ಸಿ  ಸಿಜಿಎಲ್‌/ಸಿಎಚ್‌ಎಸ್‌ಎಲ್‌ 2017 ಪರೀಕ್ಷೆಗಳಲ್ಲಿ ಅಕ್ರಮ ನಡೆದ  ಹಿನ್ನೆಲೆಯಲ್ಲಿ ಭವಿಷ್ಯದ ಪರೀಕ್ಷೆಗಳಿಗೆ ಸುರಕ್ಷತಾ ಕ್ರಮ  ಶಿಫಾರಸು ಮಾಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತಾದರೂ ಆ ಸಮಿತಿಯ ವರದಿ ಈಗಲೂ ಬಹಿರಂಗಗೊಂಡಿಲ್ಲ ಎಂದು ಅರ್ಜಿ ವಿವರಿಸಿದೆ.

ಅರ್ಜಿದಾರರ ಪರ ವಕೀಲರಾದ ಸೌರವ್ ಅಗರವಾಲ್, ರಾಧಿಕಾ ಚಾವ್ಲಾ, ಗೌಹರ್ ಮಿರ್ಜಾ, ಅಬಿಹಾ ಜೈದಿ, ಸುರಿತಿ ಚೌಧರಿ, ಪ್ರೀತಮ್ ರಾಮನ್ ಗಿರಿಯಾ ಹಾಗೂ ಅನುಜ್ ಮನೋಜ್ ಭಾವೆ ವಕಾಲತ್ತು ವಹಿಸಿದ್ದರು.

[ಆದೇಶದ ಪ್ರತಿ]

Nikhil_Kumar_vs__Union_of_India___Anr__.pdf
Preview