
ಉಜ್ಜಯಿನಿ ಮತ್ತು ಇಂದೋರ್ ಕೇಂದ್ರಗಳಲ್ಲಿ ವಿದ್ಯುತ್ ಕಡಿತದಿಂದಾಗಿ ಪದವಿ ವೈದ್ಯಕೀಯ ಕಾಲೇಜು ಪ್ರವೇಶಾತಿಗಾಗಿ ರಾಷ್ಟ್ರೀಯ-ಅರ್ಹತೆ-ಮತ್ತು-ಪ್ರವೇಶ ಪರೀಕ್ಷೆ (ನೀಟ್) ಬರೆಯುವುದಕ್ಕೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಮತ್ತೆ ಪರೀಕ್ಷೆಗೆ ಅವಕಾಶ ನೀಡದ ಮಧ್ಯಪ್ರದೇಶ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ [ಲಕ್ಷ್ಮಿ ದೇವಿ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಮುಂದೆ ಬುಧವಾರ ಅರ್ಜಿದಾರರು ಪ್ರಕರಣ ಪ್ರಸ್ತಾಪಿಸಿದಾಗ ಮುಂದಿನ ವಾರ ಪ್ರಕರಣ ಪಟ್ಟಿ ಮಾಡುವಂತೆ ಅವರು ಆದೇಶಿಸಿದರು.
ಗುಡುಗು ಸಹಿತ ಮಳೆಯಿಂದಾಗಿ ಇಂದೋರ್ ಮತ್ತು ಉಜ್ಜಯಿನಿಯ ಅನೇಕ ಕೇಂದ್ರಗಳಲ್ಲಿ 1-2 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿ, ವಿದ್ಯಾರ್ಥಿಗಳು ಕತ್ತಲಲ್ಲಿ ಪರೀಕ್ಷೆ ಬರೆಯುವ ಸ್ಥಿತಿ ನಿರ್ಮಾಣವಾಗಿತ್ತು ಎಂದು 100ಕ್ಕೂ ಹೆಚ್ಚು ಅರ್ಜಿಗಳ ಮುಖಾಂತರ ಅಭ್ಯರ್ಥಿಗಳು ದೂರಿದ್ದರು.
ವಿದ್ಯುತ್ ವ್ಯತ್ಯಯದಿಂದ ತೊಂದರೆಗೊಳಗಾದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಹಿಂದೆ ಆದೇಶಿಸಿತ್ತು. ಎನ್‌ಟಿಎ ಪರವಾಗಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿದ್ಯುತ್ ವ್ಯತ್ಯದಿಂದಾಗಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಏಕಸದಸ್ಯ ಪೀಠಕ್ಕೆ ತಿಳಿಸಿದ್ದರು. ಬಾಧಿತ ಮತ್ತು ಬಾಧಿತವಲ್ಲದ ಕೇಂದ್ರಗಳ ನಡುವಿನ ಸರಾಸರಿ ಅಂಕಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂಬ ತಜ್ಞರ ವರದಿಯನ್ನು ಅವರು ಉಲ್ಲೇಖಿಸಿದ್ದರು.
ಆದರೆ ವಿದ್ಯುತ್ ಕಡಿತದಿಂದ ಅನಾನುಕೂಲತೆ ಅನುಭವಿಸಿದ ಅರ್ಜಿದಾರರು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಮಾನ್ಯವಾದ ಆಧಾರಗಳನ್ನು ಒದಗಿಸಿದ್ದಾರೆ ಎಂದು ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ತಿಳಿಸಿದ್ದರು.
ಆದ್ದರಿಂದ, ಅರ್ಜಿದಾರರ ಶ್ರೇಯಾಂಕಗಳನ್ನು ಅವರ ಮರು ಪರೀಕ್ಷೆಯ ಅಂಕಗಳ ಆಧಾರದ ಮೇಲಷ್ಟೇ ನಿರ್ಧರಿಸಲು ಅನುವಾಗುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸಾಧ್ಯವಾದಷ್ಟು ಬೇಗ ಮರು ಪರೀಕ್ಷೆ ನಡೆಸಿ ಫಲಿತಾಂಶ ಘೋಷಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು.
ಆದರೆ ಇದನ್ನು ಪ್ರಶ್ನಿಸಿ ಪರೀಕ್ಷೆ ನಡೆಸುವ ರಾಷ್ಟ್ರೀಯಪರೀಕ್ಷಾಸಂಸ್ಥೆ (ಎನ್‌ಟಿಎ) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿತ್ತು. ಹೀಗಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.